ಬೆಂಗಳೂರು: ಟ್ರಾನ್ಸ್ ಫಾರ್ಮರ್(ಟೀಸಿ) ಸ್ಫೋಟಗೊಂಡು ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಬೆಂಕಿ ತಗುಲಿ ತಂದೆ ಮಗಳು ಮೃತಪಟ್ಟಿರುವ ದಾರುಣ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಮಂಗನಹಳ್ಳಿ ನಿವಾಸಿ ಶಿವರಾಜ್(55) ಪುತ್ರಿ ಚೈತನ್ಯ(19) ಮೃತ ದುರ್ದೈವಿಗಳು, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಂಗನಹಳ್ಳಿಯಲ್ಲಿ ವಾಸವಾಗಿದ್ದ ಶಿವರಾಜ್ ಅವರು ತಮ್ಮ ಮಗಳಿಗೆ ಮದುವೆ ನಿಗದಿಯಾಗಿದ್ದರಿಂದ ನಿನ್ನೆ ಮಧ್ಯಾಹ್ನ ತಂದೆ ಮತ್ತು ಮಗಳು ದ್ವಿಚಕ್ರ ವಾಹನದಲ್ಲಿ ಕಲ್ಯಾಣ ಮಂಟಪ ಬುಕ್ ಮಾಡಲು ಹೋಗಿದ್ದರು.
ತಮ್ಮ ಕೆಲಸ ಮುಗಿಸಿ ವಾಪಸ್ ಬರುತ್ತಿದ್ದಾಗ ಮಂಗನಹಳ್ಳಿ ಸೇತುವೆ ಬಳಿಯ ಟ್ರಾನ್ಸ್‌ಫಾರ್ಮರ್ ಸ್ಫೋಟ ಗೊಂಡಿದೆ. ಪರಿಣಾಮ ತಂದೆ ಮತ್ತು ಮಗಳಿಗೆ ಟ್ರಾನ್ಸ್‌ಫಾರ್ಮರ್‌ನ ಕೆಲ ತುಂಡುಗಳಿಂದ ಇಬ್ಬರ ಮುಖ, ಎದೆ ಹಾಗೂ ದೇಹದ ಇತರೆ ಭಾಗಗಳಿಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದು, ಅಲ್ಲದೆ, ಇಬ್ಬರಿಗೂ ಬೆಂಕಿ ಕೂಡ ಹೊತ್ತಿಕೊಂಡಿದೆ. ಶೇ.90ರಷ್ಟು ಸುಟ್ಟ ಗಾಯಗಳಿಂದ ನಡು ರಸ್ತೆಯಲ್ಲಿ ನರಳುತ್ತಿದ್ದ ತಂದೆ, ಮಗಳನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವರಾಜ್ ಅವರು ನಿನ್ನೆ ರಾತ್ರಿ ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಇಂದು ನಸುಕಿನ ವೇಳೆ ಪುತ್ರಿ ಚೈತನ್ಯ ತುರ್ತುನಿಗಾ ಘಟಕದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಿಂದ ದ್ವಿಚಕ್ರವಾಹನದ ಚಕ್ರಗಳು ಸ್ಫೋಟಗೊಂಡಿದ್ದು, ವಾಹನ ಸಂಪೂರ್ಣ ಸುಟ್ಟು ಹೋಗಿದೆ. ಘಟನೆ ಸಂಬಂಧ ಬೆಸ್ಕಾಂ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
| |