ಶಿರ್ವ ಹಿಂದೂ ಪಪೂ ಕಾಲೇಜಿನಲ್ಲಿ ಜರುಗಿತು ವೈಭವದ “ಜಾನಪದ ಕಲರವ”

ಶಿರ್ವ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶಿರ್ವ ಹಿಂದೂ ಪಪೂ ಕಾಲೇಜು ಪ್ರೌಢಶಾಲಾ ವಿಭಾಗದ ವತಿಯಿಂದ ಶುಕ್ರವಾರ (ನ.25) ಜರುಗಿದ ಜಾನಪದ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ”ನಮ್ಮ ಮೂಲ ನಿವಾಸಿಗಳಿಂದ ಬಳುವಳಿ ಯಾಗಿ ಬಂದಿರುವ ಜಾನಪದ ಸಂಪತ್ತು ಇಲ್ಲಿನ ಮಣ್ಣಿನಲ್ಲಿ ಮಿಳಿತಗೊಂಡು ನಮ್ಮ ದೈನಂದಿನ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳಲ್ಲೂ ಜಾನಪರ ಆಚಾರ ವಿಚಾರಗಳು ಇಂದಿಗೂ ಉಳಿದುಕೊಂಡು ಬಂದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾನಪದ ಪ್ರಕಾರಗಳ ಅಭಿವೃದ್ಧಿಗೆ ಹಿಂದೆಂದಿ ಗಿಂತಲೂ ಹೆಚ್ಚು ಒತ್ತು ನೀಡುತ್ತಿದೆ” ಎಂದು ಹೇಳಿದರು.

ಶಿರ್ವ ವಿದ್ಯಾವರ್ಧಕ ಸಂಘ ಆಡಳಿತಾಧಿಕಾರಿ ಪ್ರೋ ವೈ, ಭಾಸ್ಕರ್ ಶೆಟ್ಟಿ ಮಾತನಾಡಿ, “ನಮ್ಮ ಸಂಸ್ಥೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಲೇ ಪಠ್ಯೇತರ ಚಟುವಟಿಕೆ ಗಳಿಗೂ ಆಧ್ಯತೆ ನೀಡುತ್ತಿದೆ. ಇತ್ತೀಚೆಗೆ ಆರಕ್ಷಕ ಇಲಾಖೆ ಪರಿಚಯಿಸಿರುವ ಸೂಡೆಂಟ್ ಪೊಲೀಸ್ ಕಡೆಟ್ ಯೋಜನೆಗೆ ಆಯ್ಕೆಯಾದ ಜಿಲ್ಲೆಯ 24 ಪ್ರೌಢಶಾಲೆಗಳಲ್ಲಿ ನಮ್ಮ ಸಂಸ್ಥೆ ಏಕೈಕ ಅನುದಾನಿತ ಶಿಕ್ಷಣ ಸಂಸ್ಥೆಯಾಗಿದೆ” ಎಂದರು.

ವಿದ್ಯಾರ್ಥಿಗಳು ಶಿಕ್ಷಕರು ತುಳುನಾಡಿನ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟುಗಮನ ಸೆಳೆದರು. ಕಂಬಳದ ಕೋಣಗಳು, ಯಕ್ಷಗಾನ ಕಂಗೀಲು ಸಹಿತ ನಾನಾ ವೇಷಭೂಷಣಗಳೊಂದಿಗೆ ಸಾಂಪ್ರದಾಯಿಕವಾಗಿ ಶೃಂಗರಿಸಿಕೊಂಡಿದ್ದ ವಿದ್ಯಾರ್ಥಿಗಳು ಕಳಸ ಹಿಡಿದು ಅತಿಥಿಗಳನ್ನು ಸ್ವಾಗತಿಸಿದರು. ಹಸು ಮತ್ತು ಕರುವಿಗೆ ಗೋಪೂಜೆ ನೆರವೇರಿಸುವ ಮೂಲಕ ಶಾಸಕ ಲಾಲಾಜಿ ಮೆಂಡನ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಶಿರ್ವ ವಿದ್ಯಾವರ್ಧಕ ಸಂಘದ ಸಂಚಾಲಕ ವಿ. ಸುಬ್ಬಯ್ಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರೇಗೌಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಾನಪದ ಕಲಾವಿದ ಶಂಕರ್ ದಾಸ್ ಚೆಂಡ್ಕಳ, ಹಿಂದೂ ಪಪೂ ಕಾಲೇಜಿನ ಪ್ರಿನ್ಸಿಪಾಲ್‌ ಭಾಸ್ಕರ್ ಎ. ಮಾತನಾಡಿದರು.

ಉದ್ಯಮಿ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತಸರ ಸುಹಾಸ್ ಹೆಗ್ಡೆ, ಶಿರ್ವ ಗ್ರಾಪಂ ಅಧ್ಯಕ್ಷ ರತನ್‌ ಕುಮಾರ್ ಶೆಟ್ಟಿ, ಶಿರ್ವ ಹಿಂದೂ ಪಪೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ರಮಾನಂದ ಶೆಟ್ಟಿಗಾರ್, ಎಂಎಸ್‌ ಆರ್‌ಎಸ್‌ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಮಾಜಿ ಅಧ್ಯಕ್ಷ ನವೀನ್‌ ಶೆಟ್ಟಿ ಕುತ್ಯಾರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಶಿರ್ವ ವಿದ್ಯಾವರ್ಧಕ ಸಂಘದ ಸಂಚಾಲಕ ವಿ. ಸುಬ್ಬಯ್ಯ ಹೆಗ್ಡೆ ಸ್ವಾಗತಿಸಿದರು. ಹಿಂದೂ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ವಸಂತಿ ವಂದಿಸಿದರು. ಶಿಕ್ಷಕರಾದ ಸುಪ್ರೀತಾ ಶೆಟ್ಟಿ ಮತ್ತು ಶಿವರಾಜ್ ಸಿ. ನಿರೂಪಿಸಿದರು. ಕಾರ್ಯಕ್ರಮವನ್ನು ಸಂಯೋಜಿಸಿದವರು ಗಣೇಶ್ ಶೆಟ್ಟಿ (ಹಿಂದಿ ಶಿಕ್ಷಕರು).

Scroll to Top