ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಕ ಪಟ್ಟಿ ನೀಡದೆ ಸತಾಯಿಸುತ್ತಿದೆ. ಸೂಕ್ತ ಕಾಲಕ್ಕೆ ಅಂಕಪಟ್ಟಿ ದೊರಕದೇ ಇರುವುದರಿಂದ ಉನ್ನತ ಶಿಕ್ಷಣ ಮತ್ತು ವಿದ್ಯಾರ್ಥಿವೇತನಕ್ಕೆ ಸಮಸ್ಯೆಯಾಗುತ್ತಿದೆ. ಮುಂದಿನ 15 ದಿನಗಳೊಳಗೆ ಈ ಸಮಸ್ಯೆಯನ್ನು ಪರಿಹರಿಸದೇ ಇದ್ದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಾವಿರಾರು ವಿದ್ಯಾರ್ಥಿಗಳು ಮುತ್ತಿಗೆ ಹಾಕುತ್ತೇವೆ ಎಂದು ಎಬಿವಿಪಿ ಮುಖಂಡ ರಾಹುಲ್ ಎಚ್ಚರಿಕೆ ನೀಡಿದರು.ಅವರು ಗುರುವಾರ, ನಗರದ ಮಿನಿವಿಧಾನ ಸೌಧದ ಮುಂಭಾಗ ಪ್ರತಿಭಟನಾಕಾರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಮೌಲ್ಯಮಾಪನವನ್ನು ಸೂಕ್ತ ಸಮಯದಲ್ಲಿ ನಡೆಸದೇ ಇರುವುದು, ಮರು ಪರೀಕ್ಷೆ ಹಾಗೂ ಮರುಮೌಲ್ಯ ಮಾಪನಗಳಲ್ಲಿ ಗೊಂದಲ, ಮರು ಮೌಲ್ಯಮಾಪನ ಕೋಟದಲ್ಲಿ ಶುಲ್ಕ ಮರುಪಾವತಿಗೆ ನಿಗದಿ ಪಡಿಸಿದಷ್ಟು ಅಂಕ ಬಂದರೂ, ಮುಂಗಡವಾಗಿ ಕಟ್ಟಿದ ಶುಲ್ಕವು ಮರುಪಾವತಿಸಿಲ್ಲ ಎಂದು ಆರೋಪಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) ಜಾರಿಯಾದ ನಂತರ ಮೊದಲನೇ ವರ್ಷಕ್ಕೆ ಸೇರ್ಪಡೆಯಾದ ವಿದ್ಯಾರ್ಥಿಗಳು ಪ್ರಸ್ತುತ ದ್ವಿತೀಯ ವರ್ಷದಲ್ಲಿ ಇದ್ದರೂ, ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್ ನ ಮೌಲ್ಯಮಾಪನ ಈವರೆಗೂ ಆಗಿರುವುದಿಲ್ಲ. ಆದಾಗ್ಯೂ ತೃತೀಯ ಸೆಮಿಸ್ಟರ್ ನಲ್ಲಿರುವ ವಿದ್ಯಾರ್ಥಿಗಳಿಗೆ ಈ ಹಿಂದಿನ ಎರಡು ಸೆಮಿಸ್ಟರ್ ನ ಫಲಿತಾಂಶ ಇಲ್ಲದಿದ್ದರೂ ಮೂರನೇ ಸೆಮಿಸ್ಟರ್ ನ ಪರೀಕ್ಷಾ ಶುಲ್ಕವನ್ನು ಪಡೆದುಕೊಂಡಿರುತ್ತಾರೆ. ಇದು ಯಾವ ನ್ಯಾಯ..? ಎಂದು ಪ್ರಶ್ನಿಸಿದರುಮಂಗಳೂರು ವಿಶ್ವವಿದ್ಯಾನಿಲಯದ ಈ ಎಲ್ಲಾ ಬೇಜಾವಾಬ್ದಾರಿತನದಿಂದಾಗಿ ಮಕ್ಕಳು ಹಾಗೂ ಪೋಷಕರು ತಲೆತಗ್ಗಿಸುವಂತೆ ಆಗಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ವಿಭಾಗಗಳಿಗೆ ಸೇರ್ಪಡೆಯಾಗಲು ಆಗದೆ ಇರುವುದು ಶೋಚನೀಯ. ಈ ಎಲ್ಲಾ ವಿಷಯಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳು ನೇರ ಹೊಣೆಯಾಗಿರುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಅನುಭವಿಸುತ್ತಿರುವ ತೊಂದರೆಗಳನ್ನು ಶೀಘ್ರವೇ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ವಿಭಾಗ ಸಹ ಪ್ರಮುಖ ಕಿರಣ್ ಕುಂದಾಪುರ, ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಜಯ್ ಪ್ರಭು, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸುಮುಖ್ ಭಟ್, ತಾಲೂಕು ಸಂಚಾಲಕ್ ಧನುಷ್, ಜಿಲ್ಲಾ ಸಂಚಾಲಕ್ ಯುಕೇಶ್, ವಿದ್ಯಾರ್ಥಿ ಮುಖಂಡರಾದ ರಾಹುಲ್, ಧನುಷ್, ಧ್ವನಿ, ಅಪೂರ್ವ, ಕೀರ್ತನ ಮತ್ತಿತರು ಉಪಸ್ಥಿತರಿದರು.ಸುಮಾರು 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಂದಾಪುರ ನಗರದ ಶಾಸ್ತ್ರಿ ವೃತ್ತದಿಂದ 2 ಕಿ.ಮೀ ವರೆಗೆ ಮೆರವಣಿಗೆ ಮೂಲಕ ಸಾಗಿ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.