ಉಡುಪಿ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಸೈಂಟ್‌ಮೇರಿಸ್ ಐಲ್ಯಾಂಡ್ ಬಳಿ ಫ್ಲೋಟಿಂಗ್ ಜೆಟ್ಟಿ (ತೇಲುವ ಜೆಟ್ಟಿ) ನಿರ್ಮಿಸಲು 5.50 ಕೋ.ರೂ. ಕಾಮಗಾರಿಗೆ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಕರ್ನಾಟಕ ಪ್ರವಾಸೋದ್ಯಮ ವಿಷನ್ ಗ್ರೂಪ್‌ನ ಶಿಫಾರಸುಗಳಲ್ಲಿ ಸೈಂಟ್‌ಮೇರಿಸ್ ಐಲ್ಯಾಂಡ್ ಬಳಿ ಫೆರ್ರಿ ಜೆಟ್ಟಿ ನಿರ್ಮಿಸುವ ಕಾಮಗಾರಿಯನ್ನು ಪ್ರವಾಸೋದ್ಯಮ ಇಲಾಖೆಯ ಮೇಲುಸ್ತುವಾರಿಯಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ಕೈಗೊಳ್ಳಲು ಯೋಜಿಸಲಾಗಿತ್ತು. ಆದರೆ ಸಿಆರ್‌ಝಡ್ ನಿಯಮಾವಳಿ ಅನ್ವಯ ಫೆರ್ರಿ ಜೆಟ್ಟಿ ನಿರ್ಮಾಣ ಅಸಾಧ್ಯವಾಗಿರುವುದರಿಂದ ಜಿಲ್ಲಾಧಿಕಾರಿಯವರು ಫೆರ್ರಿ ಜೆಟ್ಟಿ ಬದಲು ಫ್ಲೋಟಿಂಗ್ ಜೆಟ್ಟಿ ನಿರ್ಮಿಸಲು ಪೂರಕವಾಗಿ ವರದಿಯನ್ನು ಸರಕಾರಕ್ಕೆ ಸಲ್ಲಿಸಿದರು.
ಪಿಡಬ್ಲ್ಯುಡಿ ಮೂಲಕ ಸಲ್ಲಿಸಿದ ಅಂದಾಜು ಪಟ್ಟಿಯಂತೆ ಪ್ರವಾಸೋದ್ಯಮ ಇಲಾಖೆ ಸೈಂಟ್ ಮೇರಿಸ್ ಬಳಿ ತೇಲುವ ಜೆಟ್ಟಿ ನಿರ್ಮಿಸುವ ಅನುದಾನದ ಜತೆಗೆ ಅನುಮೋದನೆ ನೀಡಿದೆ. ಈ ಪ್ರಕ್ರಿಯೆಯಲ್ಲಿ ಸ್ಥಳೀಯ ಶಾಸಕರಾದ ರಘುಪತಿ ಭಟ್ ಅವರು ವಿಶೇಷ ಶ್ರಮ ವಹಿಸಿದ್ದಾರೆ.
ತೇಲುವ ಜೆಟ್ಟಿ ನಿರ್ಮಾಣದಿಂದ ಪ್ರವಾಸಿಗರಿಗೆ ಬೋಟಿನಿಂದ ಇಳಿದು ಐಲ್ಯಾಂಡ್ ಪ್ರವೇಶಿಸಲು ಹೆಚ್ಚು ಅನುಕೂಲವಾಗುತ್ತದೆ. ಸದ್ಯ ಐಲ್ಯಾಂಡ್‌ನಲ್ಲಿ ಪ್ರವಾಸಿ ಬೋಟುಗಳನ್ನು ಲಂಗರು ಹಾಕಲು ಯಾವುದೇ ವ್ಯವಸ್ಥೆಯಿಲ್ಲ. ದೊಡ್ಡ ಬೋಟುಗಳನ್ನು ನೇರವಾಗಿ ದಡಕ್ಕೆ ತರಲು ಸಾಧ್ಯವಾಗುವುದಿಲ್ಲ. ಸಮುದ್ರದ ನೀರಿನಲ್ಲಿ ಇಳಿಯಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಫೆರ್ರಿ ಜೆಟ್ಟಿ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸಲು ತಿರ್ಮಾನಿಸಲಾಗಿತ್ತು. ಫೆರ್ರಿ ಅಸಾಧ್ಯವೆಂದು ಕಂಡುಬಂದ ಅನಂತರದಲ್ಲಿ ತೇಲುವ ಜೆಟ್ಟಿ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಲಾಗಿತ್ತು. ಈಗ ಅನುಮೋದನೆ ದೊರೆತಿದೆ..