ಬೆಂಗಳೂರು ಮಾ.29: ರಾಜ್ಯದಲ್ಲಿ ಕಾರ್ಕಳ ಪಡುಬಿದ್ರೆ ಸೇರಿ 10 ರಾಜ್ಯ ಹೆದ್ದಾರಿಗಳಲ್ಲಿ ಶೀಘ್ರದಲ್ಲೇ ಟೋಲ್ ಸಂಗ್ರಹ ಪ್ರಾರಂಭವಾಗಲಿದೆ. ಈ ಮೂಲಕ ಇನ್ನು ಮುಂದೆ ಕರ್ನಾಟಕದ ಹತ್ತು ರಾಜ್ಯ ಹೆದ್ದಾರಿಗಳಲ್ಲಿ ಪ್ರಯಾಣಕ್ಕೆ ಟೋಲ್ ಪಾವತಿಸಬೇಕಾಗುತ್ತದೆ.
ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಪ್ರಕಟಗೊಂಡ ಸುದ್ದಿಯ ಪ್ರಕಾರ, ರಾಜ್ಯ ಹೆದ್ದಾರಿಗಳ 10 ಸ್ಥಳಗಳಲ್ಲಿ ಟೋಲ್ ಸಂಗ್ರಹಕ್ಕೆ ಖಾಸಗಿ ಕಂಪನಿಗಳು ಸಲ್ಲಿಸಿರುವ ಬಿಡ್‍ಗಳ ಪರಿಶೀಲನೆ ನಡೆಯುತ್ತಿದೆ. ಹಾಗೂ ನಿರ್ವಹಣಾ ವೆಚ್ಚದ ಜತೆಗೆ ವಿವಿಧ ಏಜೆನ್ಸಿಗಳಿಂದ ಪಡೆದ ಸಾಲದ ಮೊತ್ತವನ್ನೂ ಗಮನದಲ್ಲಿಟ್ಟುಕೊಂಡು ಟೋಲ್ ನಿಗದಿ ಪಡಿಸಲಾಗುತ್ತಿದೆ. “ಟೆಂಡರ್ ಪರಿಶೀಲನೆ ಸಮಿತಿ ಈಗಾಗಲೇ 10 ರಸ್ತೆಗಳ ಬಿಡ್‍ಗಳನ್ನು ಸ್ವೀಕರಿಸಿದ್ದು, ಯಾವಾಗ ಟೋಲ್ ಸಂಗ್ರಹ ಮಾಡಬೇಕು ಎಂಬ ಬಗ್ಗೆ ಸರ್ಕಾರದ ಅನುಮತಿಗೆ ಕಾಯುತ್ತಿದ್ದೇವೆ” ಎಂದು ಕೆಆರ್‍ಡಿಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಮೂಲಗಳ ಪ್ರಕಾರ, ಪಡುಬಿದ್ರೆ- ಕಾರ್ಕಳ, ಗುಬ್ಬಿ- ಚಂದ್ರಶೇಖರಪುರ, ಯಡಿಯೂರು-ಕೌಡ್ಲಿ-ಮಂಡ್ಯ, ಹಾನಗಲ್- ತಡಸ ರಸ್ತೆ , ಶಿವಮೊಗ್ಗ- ಶಿಕಾರಿಪುರ-ಹಾನಗಲ್, ತಿಂತಣಿ-ದೇವದುರ್ಗ-ಕಲ್ಮಲ, ಸವದತ್ತಿ-ಬದಾಮಿ-ಕಮತಗಿ, ಬಳ್ಳಾರಿ- ಮೊಕ, ದಾವಣಗೆರೆ-ಬೀರೂರು ಮತ್ತು ಕೂಡ್ಲಿಗಿ- ಸಂಡೂರು- ತೋರಣಗಲ್ ಮಾರ್ಗಗಗಳಲ್ಲಿ ಒಂದು ತಿಂಗಳ ಒಳಗಾಗಿ ಟೋಲ್ ಸಂಗ್ರಹ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ಇನ್ನು ಲೋಕೋಪಯೋಗಿ ಇಲಾಖೆಯ ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆ (ಕೆ-ಶಿಪ್), ರಾಜ್ಯಾದ್ಯಂತ 31 ರಾಜ್ಯ ಹೆದ್ದಾರಿಗಳನ್ನು ನಿರ್ಮಾಣ ಮಾಡುತ್ತಿದ್ದು, ಈ ಪೈಕಿ ನಾಲ್ಕನ್ನು ಸರ್ಕಾರಿ- ಖಾಸಗಿ ಪಾಲುದಾರಿಕೆ ಮಾದರಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಈಗಾಗಲೇ ಟೋಲ್ ಸಮಗ್ರಹ ನಡೆಯುತ್ತಿದೆ. ಉಳಿದ 27 ರಸ್ತೆಗಳ ಪೈಕಿ ಹಲವು ಕಡೆ ಪ್ರಯಾಣಿಕರು ಹಲವು ವರ್ಷಗಳಿಂದ ಟೋಲ್ ಪಾವತಿಸುತ್ತಿದ್ದಾರೆ.