ಸಾವನ್ನಪ್ಪಿದ ತಾಯಿಯ ಜೊತೆ ಎರಡು ದಿನ ಕಳೆದ ಬಾಲಕ : ಬೆಂಗಳೂರಿನಲ್ಲೊಂದು ಮನಕಲಕುವ ಘಟನೆ

ಬೆಂಗಳೂರು : 14 ವರ್ಷದ ಬಾಲಕ ತನ್ನ ತಾಯಿಯ ಶವದೊಂದಿಗೆ
ಎರಡು ದಿನ ಕಳೆದ ಮನಕಲಕುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಆರ್.ಟಿ.ನಗರದ ಮನೆಯೊಂದರಲ್ಲಿ ಅಣ್ಣಮ್ಮ (44) ಎಂಬ ಮಹಿಳೆ ಫೆ.26ರಂದು ಮೃತಪಟ್ಟಿದ್ದಾರೆ. ಆದರೆ ಮಗನಿಗೆ ತಾಯಿ ತೀರಿಕೊಂಡ ವಿಷಯ ಗೊತ್ತಿರಲಿಲ್ಲ. ತಾಯಿ ಮಾತು ಬಿಟ್ಟಿದ್ದಾರೆ, ಮಲಗಿದ್ದಾರೆ ಎಂದು ಭಾವಿಸಿ ಬಾಲಕ ಶವದ ಜೊತೆ ಎರಡು ದಿನ ಕಳೆದಿದ್ದಾನೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆರ್.ಟಿ.ನಗರ ಠಾಣೆ ವ್ಯಾಪ್ತಿಯ ರೇಣುಕಾ ಯಲ್ಲಮ್ಮ ಗಂಗಮ್ಮ
ದೇವಸ್ಥಾನ ಬಳಿ ಇರುವ ಮನೆಯಲ್ಲಿ ಫೆ.26 ರಂದು ಲೋ ಬಿಪಿ ಮತ್ತು ಶುಗರ್‌ನಿಂದಾಗಿ ಅಣ್ಣಮ್ಮ ಮಲಗಿದ್ದಲ್ಲೇ ಮೃತಪಟ್ಟಿದ್ದರು.


ಫೆ.28ರ ವರೆಗೂ ಬಾಲಕ ತನ್ನ ತಾಯಿಯ ಶವದ ಜೊತೆ ಕಾಲ ಕಳೆದಿದ್ದಾನೆ. ಹೊರಗೆ ಬಂದು ಊಟ, ತಿಂಡಿ ತೆಗೆದುಕೊಂಡು ಮತ್ತೆ
ಮನೆ ಸೇರಿಕೊಳ್ಳುತ್ತಿದ್ದನಂತೆ. ರಾತ್ರಿ ಪೂರ್ತಿ ತಾಯಿಯ ಜೊತೆಯಲ್ಲೇ
ಮಲಗಿ ಕಾಲ ಕಳೆಯುತ್ತಿದ್ದ. ಅಕ್ಕಪಕ್ಕದ ಜನರಿಗೆ ತಾಯಿ ಸಾವಿನ ಬಗ್ಗೆ ಮಾಹಿತಿ ನೀಡಿಲ್ಲ. ನಂತರ ತಂದೆಯ ಸ್ನೇಹಿತರೊಬ್ಬರಿಗೆ ತಾಯಿ ಮಾತನಾಡ್ತಿಲ್ಲ ಎಂದು ಹೇಳಿದ್ದನಂತೆ. ಆ ಸ್ನೇಹಿತರು ಮನೆಗೆ ಬಂದು ನೋಡಿದಾಗ ಅಣ್ಣಮ್ಮ ಮೃತಪಟ್ಟಿರುವುದು ಗೊತ್ತಾಗಿದೆ.

ಒಂದು ವರ್ಷದ ಹಿಂದೆಯಷ್ಟೇ ಕಿಡ್ನಿ ವೈಫಲ್ಯದಿಂದ ಅಣ್ಣಮ್ಮ ಅವರ ಪತಿ ಸಾವನ್ನಪ್ಪಿದ್ದರು. ತಾಯಿ ಮತ್ತು ಮಗ ಇಬ್ಬರೇ ಮನೆಯಲ್ಲಿ ವಾಸವಿದ್ದರು.

You cannot copy content from Baravanige News

Scroll to Top