ಉಡುಪಿ: ಸ್ಮಾರ್ಟ್ ಎಲ್ಇಡಿ ದಾರಿ ದೀಪ ಅಳವಡಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ

ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ಹಾಲಿ ಇರುವ ಹಳೆಯ ಮಾದರಿಯ ಬೀದಿ ದೀಪಗಳನ್ನು ಬದಲಾಯಿಸಿ ಪಿಪಿಪಿ ಮಾದರಿಯಲ್ಲಿ ಸ್ಮಾರ್ಟ್ ಎಲ್ಇಡಿ ದೀಪಗಳನ್ನು ಅಳವಡಿಸುವ ರೂ. 24.25 ಕೋಟಿ ಮೊತ್ತದ ಯೋಜನೆಗೆ ಪೌರಾಡಳಿತ ನಿರ್ದೇಶನಾಲಯ ಆಡಳಿತಾತ್ಮಕ ಅನುಮೋದನೆ ನೀಡಿದೆ.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ/ ಮಹಾನಗರ ಪಾಲಿಕೆಗಳಲ್ಲಿ ಹಾಲಿ ಇರುವ ಸಾಂಪ್ರದಾಯಿಕ ಬೀದಿ ದೀಪಗಳನ್ನು ಬದಲಿಸಿ ಕೇಂದ್ರೀಕೃತ ಚಾಲನೆ ಮತ್ತು ನಿರ್ವಹಣೆಯುಳ್ಳ ಇಂಧನ ಕ್ಷಮತೆಯ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸುವ ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿರುತ್ತದೆ. ಈ ಯೋಜನೆಯ ಡಿಪಿಎಆರ್ ತಯಾರಿಸುವ ಸಂದರ್ಭದಲ್ಲಿ ಉಡುಪಿ ನಗರದ ಹೆಸರು ಬಿಟ್ಟು ಹೋಗಿರುವುದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹಾಲಿ ಇರುವ ಬೀದಿ ದೀಪಗಳನ್ನು ಎಲ್ಇಡಿ ದೀಪಗಳನ್ನಾಗಿ ಬದಲಾಯಿಸುವ ರೂ. 24.25 ಕೋಟಿ ಮೊತ್ತದ ಯೋಜನೆ ಸಿದ್ಧಪಡಿಸಿ ಆಡಳಿತಾತ್ಮಕ ಅನುಮೋದನೆ ನೀಡಲು ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರಿಗೆ ಸಲ್ಲಿಸಲಾಗಿತ್ತು. ಶಾಸಕ ಕೆ. ರಘುಪತಿ ಭಟ್ ಅವರು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಯೋಜನೆ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.

ಈ ಯೋಜನೆ ಅನುಷ್ಠಾನ ಆಗುವುದರಿಂದ ಉಡುಪಿ ನಗರದ ಎಲ್ಲಾ ಹಳೆಯ ಮಾದರಿಯ ಟ್ಯೂಬ್ ಲೈಟ್ ಗಳನ್ನು ಬದಲಾಯಿಸಿ ಹೊಸ ಮಾದರಿಯ ಸುಮಾರು 20 ಸಾವಿರಕ್ಕೂ ಅಧಿಕ ಸ್ಮಾರ್ಟ್ ಎಲ್ಇಡಿ ದೀಪಗಳನ್ನು ಅಳವಡಿಸಲಾಗುವುದು. ಇದರಿಂದ ಪ್ರಸ್ತುತ ದಾರಿ ದೀಪಗಳಿಂದ ವ್ಯಯ ಆಗುತ್ತಿರುವ ವಿದ್ಯುತ್ ನಲ್ಲಿ ಶೇಕಡಾ 80 ರಷ್ಟು ವಿದ್ಯುತ್ ಉಳಿತಾಯವಾಗುವ ಜೊತೆಗೆ ನಗರ ಸಭೆ ಪಾವತಿಸುತ್ತಿರುವ ವಿದ್ಯುತ್ ಬಿಲ್ಲಿನಲ್ಲಿ ಶೇಕಡಾ 80 ರಷ್ಟು ಉಳಿತಾಯವಾಗುತ್ತದೆ. ಅಲ್ಲದೆ ಈಗಿರುವ ದಾರಿದೀಪಗಳ ನಿರ್ವಹಣೆಗೆ ಪ್ರತಿ ವರ್ಷ ನಗರಸಭೆಗೆ ನಿರ್ವಹಣಾ ವೆಚ್ಚ ರೂ 1.20 ಕೋಟಿ ವೆಚ್ಚವಾಗುತ್ತಿದ್ದು, ಇದೂ ಉಳಿತಾಯವಾಗುತ್ತದೆ. ಈ ಪಿಪಿಪಿ ಯೋಜನೆಯಲ್ಲಿ ಸ್ಮಾರ್ಟ್ ಸ್ಟ್ರೀಟ್ ಲೈಟ್ ಅಳವಡಿಸುವುದರಿಂದ ನಿರ್ವಹಣಾ ವೆಚ್ಚ ಇರುವುದಿಲ್ಲ. ಇದರಲ್ಲಿ ಆಧುನಿಕ ಮಾದರಿಯ ಈ ವ್ಯವಸ್ಥೆ ಇರುವುದರಿಂದ ಇದರ ಕಮಾಂಡ್ ಸೆಂಟರ್ ನಗರಸಭೆಯ ಕಚೇರಿಯಲ್ಲಿ ಇದ್ದು ಯಾವ ದಾರಿ ದೀಪ ಕೆಟ್ಟು ಹೋದರು ಅಲ್ಲೇ ಗುರುತಿಸುವ ವ್ಯವಸ್ಥೆ ಇರುತ್ತದೆ.

Scroll to Top