ಕಾಪು: ಸರಕಾರಿ ಅಧಿಕಾರಿಗೆ ಸುಳ್ಳು ಮಾಹಿತಿಯನ್ನು ನೀಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಕಾಪುವಿನ ಪಡು ಗ್ರಾಮದ ದಯಾನಂದ ಸುವರ್ಣ ರವರು ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ತಾಯಿ ಜಾನಕಿರವರಿಗೆ ಕಾಪು ತಾಲೂಕಿನ ಪಡು ಗ್ರಾಮದ ಸರ್ವೆ ನಂಬ್ರ 66/10 ರಲ್ಲಿ ಸ್ಥಿರಾಸ್ತಿ ಹೊಂದಿದ್ದು, ಅವರ ಮರಣ ನಂತರ ವಾರೀಸು ನೆಲೆಯಲ್ಲಿ ಸ್ಥಿರಾಸ್ತಿಯನ್ನು ದಯಾನಂದ ಸುವರ್ಣ ರವರು ಅನುಭವಿಸಿಕೊಂಡು ಬರುತ್ತಿದ್ದಾರೆ. ಸ್ಥಿರಾಸ್ತಿಯಲ್ಲಿರುವ ಮನೆಯಲ್ಲಿ 5 ವರ್ಷದ ಹಿಂದೆ ಆರೋಪಿ ಹೇಮಂತ್ ಕೋಟ್ಯಾನ್ ಬಾಡಿಗೆಗೆ ವಾಸವಾಗಿದ್ದು ಬಳಿಕ ಮನೆ ಬಿಟ್ಟು ಬೇರೆ ಕಡೆಗೆ ಹೋಗಿರುತ್ತಾರೆ. ಬಳಿಕ ಆರೋಪಿ ಲೀಲಾಧರ ಕೋಟ್ಯಾನ್, ಯಶೋಧ ಇವರು ಮನೆಯಲ್ಲಿ ಬಾಯ್ದೆರೆಯಲ್ಲಿ ವಾಸಮಾಡಿಕೊಂಡಿದ್ದು, ಬಳಿಕ ಮನೆಯನ್ನು ಬಿಟ್ಟುಕೊಡದೇ ಇದ್ದು ಈ ಬಗ್ಗೆ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅಲ್ಲದೆ ಸ್ಥಿರಾಸ್ತೀಯಲ್ಲಿರುವ ನಾಗಬನದ ಅಭಿವೃದ್ದಿ ಮತ್ತು ಜಿರ್ಣೋದ್ಧಾರಕ್ಕಾಗಿ “ಶ್ರೀ ಆಶ್ವಥ ನಾರಾಯಣ ನಾಗ ಸನ್ನಿಧಿ ಟ್ರಸ್ಟ್” ಇದ್ದು ಪೂಜಾ ವಿಧಾನಗಳನ್ನು ನೆಡೆಸಿಕೊಂಡು ಬರುತ್ತಾರೆ. ದಯಾನಂದ ಸುವರ್ಣರವರು ಟ್ರಸ್ಟ್ ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದು ನಾಗಬನದ ಜೀರ್ಣೋದ್ದಾರಕ್ಕಾಗಿ ಸರಕಾರದಿಂದ ಬರುವ ಅನುಧಾನ ಪಡೆಯಲು ಅರ್ಜಿ ಸಲ್ಲಿಸಿದ್ದರು.
ಹೇಮಂತ್ ಕೋಟ್ಯಾನ್ ಮತ್ತು ಯಶೋಧ ಸೇರಿ ಸರಕಾರಿ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಆಕ್ಷೇಪಣೆಯನ್ನು ಸಲ್ಲಿಸಿ, ಮಹಜರುಗಳಿಗೆ ನಕಲಿ ಸಹಿಗಳನ್ನು ತಯಾರಿಸಿ ಅನುದಾನ ಮಂಜೂರಾಗದಂತೆ ಮಾಡಿದ್ದಾರೆ. ಆರೋಪಿಗಳು ಈ ಎಲ್ಲಾ ವಿಚಾರಗಳಿಂದ ದಯಾನಂದ ಸುವರ್ಣ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ ಸರಕಾರಿ ಅಧಿಕಾರಿಗೆ ಸುಳ್ಳು ಮಾಹಿತಿಯನ್ನು ನೀಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಷ್ಟ ಹಾಗೂ ನಂಬಿಕೆ ದ್ರೋಹ ಎಸಗಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.