ನವದೆಹಲಿ: ಬಾಲಿವುಡ್ ನಟ-ನಟಿಯರು ಮತ್ತು ಕ್ರಿಕೆಟಿಗರ ಹೆಸರಿನಲ್ಲಿ ವಂಚಕರ ಗುಂಪೊಂದು ನಕಲಿ ಕ್ರೆಡಿಟ್ ಕಾರ್ಡ್ ಪಡೆದು ವಂಚನೆ ಎಸಗಿರುವ ಜಾಲವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ.
ಐವರನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ.
ಸುನಿಲ್ ಕುಮಾರ್, ಮೊಹಮದ್ ಆಸಿಫ್, ಪುನೀತ್, ಪಂಕಜ್, ವಿಶ್ವ ಭಾಸ್ಕರ್ ಶರ್ಮಾ ಬಂಧಿತ ಆರೋಪಿಗಳು.
ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ, ಬಾಲಿವುಡ್ ತಾರೆಯರಾದ ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್, ಇಮ್ರಾನ್ ಹಶ್ಮಿ ಅವರ ಹೆಸರು ಮತ್ತು ವಿವರಗಳನ್ನು ವಂಚಕರು ವಂಚನೆ ಎಸಗಲು ಬಳಸಿಕೊಂಡಿದ್ದಾರೆ.
ಆನ್‌ಲೈನ್ ತಾಣಗಳ ಮೂಲಕ ಬಾಲಿವುಡ್ ತಾರೆಯರು ಮತ್ತು ಕ್ರಿಕೆಟಿಗರ ಜಿಎಸ್‌ಟಿ ಗುರುತಿನ ಸಂಖ್ಯೆಗಳಿಂದ ಪ್ಯಾನ್ ವಿವರ ಪಡೆದುಕೊಂಡು ಅವುಗಳ ಮೂಲಕ ಪುಣೆ ಮೂಲದ ಫಿನ್‌ಟೆಕ್ ಸ್ಟಾರ್ಟ್‌ಅಪ್ ಒನ್ ಕಾರ್ಡ್‌ನಿಂದ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ಇದೇ ಕ್ರೆಡಿಟ್ ಕಾರ್ಡ್‌ಗಳನ್ನು ಮುಂದಿಟ್ಟುಕೊಂಡು 50 ಲಕ್ಷ ರೂ. ವಂಚನೆ ಎಸಗಿದ್ದಾರೆ ಎಂದು ಶಹಾದ್ರಾ ಡಿಸಿಪಿ ರೋಹಿತ್ ಮೀನಾ ತಿಳಿಸಿದ್ದಾರೆ.
ಸದ್ಯ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ವಂಚನೆ ಎಸಗಲು ಬಳಸಿಕೊಂಡ ಮಾರ್ಗಗಳನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಗೂಗಲ್ ಮುಖಾಂತರ ಸೆಲೆಬ್ರಿಟಿಗಳ ವಿವರ ಪಡೆದುಕೊಂಡು ವಂಚನೆಗೆ ಬಳಸಿಕೊಳ್ಳುತ್ತಿದ್ದರು. ತಮ್ಮ ಚಿತ್ರಗಳನ್ನು ಆ ಕ್ರೆಡಿಟ್ ಕಾರ್ಡ್‌ಗಳಲ್ಲಿ ಹಾಕಿಕೊಳ್ಳುತ್ತಿದ್ದರು ಎಂದಿದ್ದಾರೆ.