ಚೀನಾದಿಂದ ಬೆಂಗಳೂರಿಗೆ ಶಿಫ್ಟ್; ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ಐಫೋನ್ ತಯಾರಿಕಾ ಘಟಕ

ಬೆಂಗಳೂರು: ಕೋವಿಡ್ ಬಳಿಕ ಚೀನಾ ಹಾಗೂ ಅಮೆರಿಕ ನಡುವೆ ಸಂಘರ್ಷ ಹೆಚ್ಚಾಗಿ, ಇದೀಗ ಆಪಲ್ ಕಂಪನಿ ತನ್ನ ತಯಾರಿಕಾ ಘಟಕವನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸಲು ಮುಂದಾಗುತ್ತಿದೆ. ಆಪಲ್‌ನ ಉತ್ಪನ್ನಗಳನ್ನು ತಯಾರಿಸುವ ಕಂಪನಿಯಾಗಿರುವ ಫಾಕ್ಸ್‌ಕಾನ್‌ನ ಘಟಕ ಶೀಘ್ರವೇ ಬೆಂಗಳೂರಿನ ಸಮೀಪ ಸ್ಥಾಪನೆಯಾಗಲಿದೆ.

ವರದಿಗಳ ಪ್ರಕಾರ ಆಪಲ್ ಫೋನ್‌ಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಪಾಲುದಾರ ಕಂಪನಿ ಫಾಕ್ಸ್‌ಕಾನ್‌ ಟೆಕ್ನಾಲಜಿ ಗ್ರೂಪ್ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಮಾರು 300 ಎಕರೆ ಪ್ರದೇಶದಲ್ಲಿ ಉತ್ಪಾದನಾ ಘಟಕ ನಿರ್ಮಾಣವಾಗಲಿದೆ. ಇದಕ್ಕಾಗಿ ಕಂಪನಿ ಸುಮಾರು 700 ಮಿಲಿಯನ್ ಡಾಲರ್ (ಸುಮಾರು 5.7 ಸಾವಿರ ಕೋಟಿ ರೂ.) ಹೂಡಿಕೆ ಮಾಡಲು ಯೋಜಿಸಿದೆ.

ಬೆಂಗಳೂರಿನ ಸಮೀಪ ನಿರ್ಮಾಣವಾಗುತ್ತಿರುವ ಆಪಲ್ ಉತ್ಪಾದನಾ ತಾಣ ಸುಮಾರು 1 ಲಕ್ಷದಷ್ಟು ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಚೀನಾದ ಝೆಂಗ್‌ಝೌದಲ್ಲಿರುವ ಕಂಪನಿಯ ವಿಶಾಲವಾದ ಉತ್ಪಾದನಾ ಘಟಕದಲ್ಲಿ ಸುಮಾರು 2 ಲಕ್ಷ ಉದ್ಯೋಗಿಗಳಿದ್ದಾರೆ. ಬೆಂಗಳೂರಿನಲ್ಲೂ ಉತ್ಪಾದನೆ ಹೆಚ್ಚಳವಾಗುತ್ತಿದ್ದಂತೆ ಉದ್ಯೋಗಿಗಳ ಸಂಖ್ಯೆಯೂ ಹೆಚ್ಚಲಿದೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಕರ್ನಾಟಕದಲ್ಲಿ 300 ಎಕರೆ ಪ್ರದೇಶದಲ್ಲಿ ಆಪಲ್ ಫೋನ್ ಉತ್ಪಾದನೆಯ ಕಾರ್ಖಾನೆ ನಿರ್ಮಾಣವಾಗಲಿದೆ. ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರವೇ ಇದು ಸಾಧ್ಯವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದ. ಈ ಘಟಕದಿಂದ ರಾಜ್ಯದಲ್ಲಿ ಹೂಡಿಕೆ ಹಾಗೂ ಸ್ಥಳೀಯರಿಗೆ ಅವಕಾಶ ಒದಗಲಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ಆಪಲ್ ತಯಾರಿಕಾ ಘಟಕದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಶೀಘ್ರದಲ್ಲೇ ಆಪಲ್ ಫೋನ್‌ಗಳು ನಿರ್ಮಾಣವಾಗಲಿದೆ. ಇದರಿಂದ ಸುಮಾರು 1 ಲಕ್ಷ ಉದ್ಯೋಗ ಸೃಷ್ಟಿಯಾಗುವುದಲ್ಲದೇ ಕರ್ನಾಟಕಕ್ಕೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ 2025ರ ಹೊತ್ತಿಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ನಮ್ಮ ಕೊಡುಗೆಯನ್ನು ನೀಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

Scroll to Top