ಇಂದಿನಿಂದ ಚೊಚ್ಚಲ WPL : 5 ತಂಡ, 22 ಪಂದ್ಯ

ಮುಂಬೈ: ಪುರುಷರ ಐಪಿಎಲ್‌ ಆರಂಭವಾಗಿ ಒಂದೂವರೆ ದಶಕವೇ ಉರುಳಿತು, ವನಿತಾ ಐಪಿಎಲ್‌ ಯಾವಾಗ ಎಂಬ ಅದೆಷ್ಟೋ ಕಾಲದ ಪ್ರಶ್ನೆಗೆ ಇಂದಿನಿಂದ ಉತ್ತರ ಲಭಿಸಲಿದೆ.

ಬಿಸಿಸಿಐ ಇಂಥದೊಂದು ಪ್ರಯತ್ನಕ್ಕೆ ಮುಂದಾಗಿದ್ದು, 5 ತಂಡಗಳ ನಡುವೆ ಐಪಿಎಲ್‌ ಮಾದರಿಯಲ್ಲೇ ವನಿತಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಆರಂಭವಾಗಲಿದೆ. ವಿಶ್ವದ ತಾರಾ ಆಟಗಾರ್ತಿಯರೆಲ್ಲ ಒಟ್ಟುಗೂಡುವ ಕಾರಣದಿಂದ ಈ ಟೂರ್ನಿ ಕ್ರಿಕೆಟ್‌ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಇಷ್ಟು ಕಾಲ ವನಿತಾ ಕ್ರಿಕೆಟ್‌ ಲೀಗ್‌ ಎಂದರೆ ಕೇವಲ ಆಸ್ಟ್ರೇಲಿಯದ ಬಿಗ್‌ ಬಾಶ್‌ ಲೀಗ್‌ ಮಾತ್ರ ನೆನಪಾಗುತ್ತಿತ್ತು. ಈ ನಡುವೆ ಐಪಿಎಲ್‌ ನಡುವೆ ಬಿಸಿಸಿಐ 3 ತಂಡಗಳ ನಡುವಿನ ವನಿತಾ ಕಿರು ಕ್ರಿಕೆಟ್‌ ಪಂದ್ಯಾವಳಿಯನ್ನು ನಡೆಸುತ್ತಿತ್ತಾದರೂ ಇದು ಕೇವಲ ಲೆಕ್ಕದ ಭರ್ತಿಯದ್ದಾಗಿತ್ತು. ಅಲ್ಲದೇ ಇದರಲ್ಲಿ ವಿದೇಶಿ ಕ್ರಿಕೆಟಿಗರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇರುತ್ತಿತ್ತು. ಕೇವಲ 7 ಪಂದ್ಯಗಳಲ್ಲಿ ಇಡೀ ಪಂದ್ಯಾವಳಿಯೇ ಮುಗಿದು ಹೋಗುತ್ತಿತ್ತು. ಇಲ್ಲಿನ ಕೊರತೆಯನ್ನೆಲ್ಲ ಡಬ್ಲ್ಯುಪಿಎಲ್‌ ನಿವಾರಿಸುವುದರಲ್ಲಿ ಅನುಮಾನವಿಲ್ಲ.

ಇದು ಒಟ್ಟು 22 ಪಂದ್ಯಗಳ ಮುಖಾಮುಖಿ. 87 ಆಟಗಾರ್ತಿಯರು ಕಣದಲ್ಲಿದ್ದಾರೆ.

ಆತಿಥ್ಯ ಮುಂಬಯಿಗಷ್ಟೇ ಮೀಸಲು. ಇಲ್ಲಿನ ಬ್ರೆಬೋರ್ನ್ ಸ್ಟೇಡಿಯಂ ಮತ್ತು ಡಾ. ಡಿ.ವೈ. ಪಾಟೀಲ್‌ ಸ್ಟೇಡಿಯಂಗಳಲ್ಲಿ ಪಂದ್ಯಗಳು ಸಾಗುತ್ತವೆ. ಪ್ರತಿಯೊಂದು ತಂಡ ಎದುರಾಳಿ ತಂಡದ ವಿರುದ್ಧ ಎರಡು ಲೀಗ್‌ ಪಂದ್ಯಗಳನ್ನು ಆಡಲಿದೆ. ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. 2-3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ ಸುತ್ತಿನಲ್ಲಿ ಆಡಲಿವೆ. ಗೆದ್ದ ತಂಡಕ್ಕೆ ಫೈನಲ್‌ ಟಿಕೆಟ್‌ ಲಭಿಸಲಿದೆ. ಮಾ. 26ರಂದು ಪ್ರಶಸ್ತಿ ಕದನ ಏರ್ಪಡಲಿದೆ. ಶನಿವಾರದ ಉದ್ಘಾಟನ ಪಂದ್ಯದಲ್ಲಿ ಮುಂಬೈ-ಗುಜರಾತ್‌ ಎದುರಾಗಲಿವೆ.

5 ತಂಡಗಳೆಂದರೆ, ಮುಂಬೈ ಇಂಡಿಯನ್ಸ್‌, ರಾಯಲ್‌ ಚಾಲೆಂಜರ್ ಬೆಂಗಳೂರು, ಗುಜರಾತ್‌ ಜೈಂಟ್‌, ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಯುಪಿ ವಾರಿಯರ್. ಕ್ರಮವಾಗಿ ಹರ್ಮನ್‌ಪ್ರೀತ್‌ ಕೌರ್‌, ಸ್ಮತಿ ಮಂಧನಾ, ಬೆತ್‌ ಮೂನಿ, ಮೆಗ್‌ ಲ್ಯಾನಿಂಗ್‌, ಅಲಿಸ್ಸಾ ಹೀಲಿ ನಾಯಕಿಯರಾಗಿದ್ದಾರೆ. ನಾಯಕಿಯರಲ್ಲಿ ಆಸ್ಟ್ರೇಲಿಯದ ಗರಿಷ್ಠ ಮೂವರಿದ್ದಾರೆ. ಉಳಿದಿಬ್ಬರು ಭಾರತೀಯರು.

Scroll to Top