ದ್ವಿತೀಯ ಪಿಯುಸಿ ಪರೀಕ್ಷೆ; ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಘೋಷಿಸಿದ ಕೆಎಸ್​ಆರ್​ಟಿಸಿ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶುಭ ಸುದ್ದಿ ನೀಡಿದೆ. ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳು ಉಚಿತವಾಗಿ ಕೆಎಸ್ಆರ್​​ಟಿಸಿ ಬಸ್​​ನಲ್ಲಿ ಸಂಚರಿಸಬಹುದು ಎಂದು ನಿಗಮ ತಿಳಿಸಿದೆ.

ಪರೀಕ್ಷೆ ಬರೆಯುವುದಕ್ಕಾಗಿ ಇತರೆ ವಿದ್ಯಾಸಂಸ್ಥೆಗಳಿಗೆ ತೆರಳುವವರಿಗೂ ಇದು ಅನ್ವಯವಾಗಲಿದೆ. ಮಾರ್ಚ್ 9ರಿಂದ ಮಾರ್ಚ್ 29ರ ವರೆಗೆ ವಿದ್ಯಾರ್ಥಿಗಳು ಉಚಿತವಾಗಿ ಸಂಚರಿಸಬಹುದು ಎಂದು ನಿಗಮ ತಿಳಿಸಿದೆ.

ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಬಸ್​​ನಲ್ಲಿ ಪ್ರಯಾಣಿಸಬಹುದಾಗಿದೆ ಎಂದು ತಿಳಿಸಿರುವ ನಿಗಮ, ಬಸ್ ಚಾಲಕರಿಗೆ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರಗಳ ಮುಂದೆ ನಿಲುಗಡೆ ನೀಡುವಂತೆ ಸೂಚಿಸಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯನ ಮಂಡಳಿಯ ಅಧ್ಯಕ್ಷರು ಪರೀಕ್ಷೆ ಬರೆಯಲು ತೆರಳುವ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರಯಾಣದ ವ್ಯವಸ್ಥೆ ಮಾಡುವಂತೆ ಕೆಎಸ್​ಆರ್​ಟಿಸಿಗೆ ಮನವಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿರುವ ಕೆಎಸ್​ಆರ್​ಟಿಸಿ, ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳಿಗೆ ಮತ್ತು ಅಲ್ಲಿಂದ ವಾಪಸಾಗಲು ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದೆ.

ಯಾವೆಲ್ಲಾ ಬಸ್​​ಗಳಲ್ಲಿ ಉಚಿತ ಪ್ರಯಾಣ..!!??

ಕೆಎಸ್​ಆರ್​ಟಿಸಿಯ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಕೋರಿಕೆ ಮೇರೆಗೆ ನಿಲುಗಡೆ ನೀಡಬೇಕು ಎಂದು ಚಾಲಕ ಮತ್ತು ನಿರ್ವಾಹಕರಿಗೂ ಸೂಚನೆ ನೀಡಿದೆ.

Scroll to Top