ಒಂದೇ ಸಿರಿಂಜ್‌ನಿಂದ ಹಲವು ರೋಗಿಗಳಿಗೆ ಇಂಜೆಕ್ಷನ್; ಬಾಲಕಿಗೆ ಎಚ್‌ಐವಿ ಪಾಸಿಟಿವ್

ಉತ್ತರಪ್ರದೇಶ: ಆಸ್ಪತ್ರೆಗೆ ವಿವಿಧ ಕಾಯಿಲೆಗಳಿಗೆಂದು ಬಂದ ಹಲವಾರು ರೋಗಿಗಳಿಗೆ ಒಂದೇ ಸಿರಿಂಜ್‌ನಿಂದ ಇಂಜೆಕ್ಷನ್ ಕೊಟ್ಟ ಪರಿಣಾಮ ಬಾಲಕಿಯೊಬ್ಬಳಿಗೆ ಎಚ್‌ಐವಿ ಪಾಸಿಟಿವ್ ಬಂದಿರುವ ಘಟನೆ ಇಟಾಹ್‌ನಲ್ಲಿ ನಡೆದಿದೆ.

ಫೆಬ್ರವರಿ 20 ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದಳು. ಹಲವು ರೋಗಿಗಳಿಗೆ ನೀಡಲಾದ ಒಂದೇ ಸಿರಿಂಜ್‌ನಲ್ಲಿ ಈ ಬಾಲಕಿಗೂ ಇಂಜೆಕ್ಷನ್ ನೀಡಲಾಗಿತ್ತು. ಇದರಿಂದ ಬಾಲಕಿಗೆ ಎಚ್‌ಐವಿ ಪಾಸಿಟಿವ್ ಬಂದಿದೆ ಎಂದು ಕುಟುಂಬಿಕರು ಆರೋಪಿಸಿದ್ದಾರೆ.

ಈ ಸಂಬಂಧ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂಕಿತ್ ಕುಮಾರ್ ಅಗರ್ವಾಲ್ ಅವರಿಗೆ ಬಾಲಕಿ ಪೋಷಕರು ದೂರು ನೀಡಿದ್ದು, ಬಾಲಕಿ ಎಚ್‌ಐವಿ ಪಾಸಿಟಿವ್ ಎಂದು ಪತ್ತೆಯಾದಾಗ ರಾತ್ರೋರಾತ್ರಿ ಬಲವಂತವಾಗಿ ಆಸ್ಪತ್ರೆಯವರು ನಮ್ಮನ್ನು ಹೊರ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಘಟನೆ ಬಗ್ಗೆ ಇಟಾಹ್‌ನಲ್ಲಿರುವ ರಾಣಿ ಅವಂತಿ ಬಾಯಿ ಲೋಧಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಿಂದ ವಿವರಣೆ ಕೇಳಲಾಗಿದೆ. ಘಟನೆಯ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಟ್ವೀಟ್ ಮಾಡಿದ್ದಾರೆ. ತನಿಖೆಗೆ ಆದೇಶಿಸಲಾಗಿದ್ದು, ವರದಿ ಬಂದ ನಂತರ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ಇಟಾಹ್ ಸಿಎಂಒ ಉಮೇಶ್ ಕುಮಾರ್ ತ್ರಿಪಾಠಿ ಹೇಳಿದ್ದಾರೆ.

Scroll to Top