ಕಳ್ಳರ ಹಾವಳಿ; ಸಾಕು ಹುಂಜಗಳಿಗೆ ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ಮಹಿಳೆ

ರಾಯಪುರ: ನೆರೆಹೊರೆಯವರು ಕಳ್ಳತನ ಮಾಡುವ ಭಯದ ಹಿನ್ನೆಲೆಯಲ್ಲಿ ತನ್ನ ಸಾಕು ಹುಂಜಗಳಿಗೆ ರಕ್ಷಣೆ ನೀಡಬೇಕೆಂದು ಕೋರಿ ಮಹಿಳೆಯೊಬ್ಬರು ಪೊಲೀಸರ ಮೊರೆ ಹೋದ ಪ್ರಸಂಗ ಛತ್ತೀಸ್‌ಘಡದಲ್ಲಿ ನಡೆದಿದೆ.

ಛತ್ತೀಸ್‌ಘಡದ ರತನ್‌ಪುರದ ಜಾಂಕಿ ಬಾಯಿ ಬಿಜ್ವಾರ್ ಅವರೇ ಹುಂಜಗಳಿಗೆ ರಕ್ಷಣೆ ಕೋರಿದ ಮಹಿಳೆ. ಈ ಮಹಿಳೆಗೆ ಹುಂಜಗಳೆಂದರೆ ಅಪಾರ ಪ್ರೀತಿ. ಇದರಿಂದ ತಮ್ಮ ಮನೆಯಲ್ಲಿ ಅವರು ಕೆಲವು ಹುಂಜಗಳನ್ನು ಸಾಕಿದ್ದರು. ಆದರೆ ಇತ್ತೀಚೆಗೆ ನೆರೆಹೊರೆಯವರಾದ ಉಬುಗಲ್ ಮತ್ತು ದುರ್ಗಾ ಎಂಬಿಬ್ಬರು ತನ್ನ ಸಾಕು ಹುಂಜಗಳನ್ನು ಕದಿಯಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ ಹುಂಜಗಳಿಗೆ ರಕ್ಷಣೆ ನೀಡಬೇಕು ಎಂದು ಅವರು ಬಿಲಾಸ್ಪುರದ ರತನ್ಪುರ ಪೊಲೀಸ್ ಠಾಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ನಾನು ಸಾಕಿದ ಎರಡು ಕೆಜಿ ತೂಕದ ಕಂದು ಬಣ್ಣದ ಹುಂಜವನ್ನು ಪದಾರ್ಥಕ್ಕೆಂದು ಅವರು ಕೊಂಡೊಯ್ದಿರುವುದನ್ನು ನಾನು ನೋಡಿದ್ದೆ. ಕೂಡಲೇ ಅವರ ಮನೆಗೆ ಧಾವಿಸಿ ಗಲಾಟೆ ಮಾಡಿ ಕೋಳಿಯನ್ನು ವಾಪಾಸ್ ಪಡೆದುಕೊಂಡು ಬಂದೆ. ಕೋಳಿಗೆ ಅವರು ಗಂಭೀರ ಗಾಯ ಮಾಡಿದ್ದರು ಎಂದೂ ಆಕೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಈ ಸಂಬಂಧ ಪೊಲೀಸರು ಮಾತನಾಡಿ, ನೆರೆಹೊರೆಯವರಲ್ಲಿ ಮಾತನಾಡಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ಪ್ರಯತ್ನಿಸುತ್ತೇವೆ. ಒಂದು ವೇಳೆ ಅವರು ಮಾತುಕತೆಗೆ ಸಿದ್ದರಿಲ್ಲದಿದ್ದರೆ ನಾವು ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

You cannot copy content from Baravanige News

Scroll to Top