ಪ್ರವಾಸಕ್ಕೆಂದು ಕರೆದೊಯ್ದು ನಟೋರಿಯಸ್ ರೌಡಿಶೀಟರ್ ಬರ್ಬರ ಹತ್ಯೆ..!!

ಹಾಸನ: ನಟೋರಿಯಸ್ ರೌಡಿಶೀಟರ್‌ನನ್ನು ಜೊತೆಯಲ್ಲಿದ್ದ ಸ್ನೇಹಿತರೇ ಬರ್ಬರವಾಗಿ ಕೊಲೆ ಮಾಡಿ ಗುಂಡಿ ತೆಗೆದು ಹೂತು ಹಾಕಿರುವ ಘಟನೆ ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಂತೋಷ್ (36) ಅಲಿಯಾಸ್ ಪುಲ್ಲಿ ಕೊಲೆಯಾದ ರೌಡಿಶೀಟರ್.

ಪುಲ್ಲಿಯ ರೈಟ್ ಹ್ಯಾಂಡ್ ಆಗಿದ್ದ ಪ್ರೀತಮ್‍ಗೌಡ (25) ಹಾಗೂ ಸ್ನೇಹಿತ ಕೀರ್ತಿ ಕೊಲೆ ಆರೋಪಿಗಳಾಗಿದ್ದಾರೆ.

ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಕರೆದೊಯ್ದು ದಟ್ಟ ಅರಣ್ಯ ಪ್ರದೇಶದಲ್ಲಿ ಮೂವರು ಎಣ್ಣೆ, ಗಾಂಜಾ ಸೇವಿಸಿ ಮತ್ತಿನಲ್ಲಿದ್ದ ವೇಳೆ ಪುಲ್ಲಿಯನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಕುರುವಂಗಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗುಂಡಿ ತೆಗೆದು ಹೂತು ಹಾಕಿ ವಾಪಸ್ ಮನೆಗೆ ಬಂದಿದ್ದರು.

ಪುಲ್ಲಿ ಕಾಣಿಯಾಗಿ ಹದಿನೈದು ದಿನಗಳ ನಂತರ ಆತನ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ಆರೋಪಿಗಳು ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾರೆ.

ಹಾಸನದ ದಾಸರಕೊಪ್ಪಲು ಗ್ರಾಮದ ಸಂತೋಷ್ ಅಲಿಯಾಸ್ ಪುಲ್ಲಿ ಕಾಲೇಜು ದಿನಗಳಿಂದಲೂ ರೌಡಿಸಂ ಮಾಡುತ್ತಿದ್ದ. ಇವರ ಕಾಟ ತಾಳಲಾರದೆ ಹದಿನೈದು ವರ್ಷಗಳ ಹಿಂದೆಯೇ ಹಾಸನ ನಗರದ ಸ್ಲೇಟರ್ಸ್ ಹಾಲ್ ಬಳಿ ಗುಂಪೊಂದು ಅಟ್ಯಾಕ್ ಮಾಡಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ, ಕಲ್ಲು ಎತ್ತಿಹಾಕಿ, ಹಾರೆಯನ್ನು ದೇಹಕ್ಕೆ ಚುಚ್ಚಿ ಹೋಗಿದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದ. ಆಸ್ಪತ್ರೆಯಿಂದ ಬಂದವನೆ ಮತ್ತೆ ರೌಡಿಸಂ ಶುರು ಮಾಡಿದ್ದ. ಇವನ ಜೊತೆ ಪ್ರೀತಮ್ ಹಾಗೂ ಕೀರ್ತಿ ಸಹ ಸೇರಿಕೊಂಡಿದ್ದರು.

ಕೆಲ ವರ್ಷಗಳ ಹಿಂದೆ ಗಾಂಜಾ ಸೇವಿಸಿ ದಾಸರಕೊಪ್ಪಲಿನಲ್ಲಿ ಹಾಡುಹಗಲೇ ಸಂತೋಷ್ ಅಲಿಯಾಸ್ ಗುಂಡನನ್ನು ನಡುರಸ್ತೆಯಲ್ಲಿ ಕೊಚ್ಚಿ ಕೊಂದಿದ್ದರು. ಈ ಪ್ರಕರಣದಲ್ಲಿ ಕೆಲ ತಿಂಗಳು ಜೈಲಿಗೆ ಹೋಗಿ ಬಂದಿದ್ದರು. ಆದರೂ ಬುದ್ದಿ ಕಲಿಯದ ಪುಲ್ಲಿ ಮತ್ತವನ ಗ್ಯಾಂಗ್ ಅಮಾಯಕರ ಮೇಲೆ ಹಲ್ಲೆ ಮಾಡುವುದು, ಜನರನ್ನು ಹೆದರಿಸಿ ಹಣ ವಸೂಲಿ ಮಾಡುವುದು ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಮಾಂಸಾಹಾರ ಹೋಟೆಲ್‍ವೊಂದರಲ್ಲಿ ಕುಡಿದು ಊಟ ಮಾಡಿದ್ದು, ಬಿಲ್ ಕೇಳಿದ್ದಕ್ಕೆ ಓರ್ವನಿಗೆ ಪುಲ್ಲಿ ಚಾಕುವಿನಿಂದ ಇರಿದಿದ್ದ.

ಪುಲ್ಲಿ ಹಾಗೂ ಪ್ರೀತಮ್ ಮೇಲೆ ಬಡಾವಣೆ ಠಾಣೆಯಲ್ಲಿ ರೌಡಿಶೀಟರ್ ಓಪನ್ ಮಾಡಲಾಗಿತ್ತು. ಸಂತೋಷ್, ಪ್ರೀತಮ್ ಹಾಗೂ ಕೀರ್ತಿ ಹತ್ತಿರ ಎಲ್ಲಾ ಕೆಲಸ ಮಾಡಿಸುತ್ತಿದ್ದ. ಆದರೆ ಸರಿಯಾಗಿ ಪಾಲು ಕೊಡುತ್ತಿರಲಿಲ್ಲ. ಇದರಿಂದ ಪ್ರೀತಮ್ ಹಾಗೂ ಸ್ನೇಹಿತರು ಪುಲ್ಲಿ ಮೇಲೆ ಗರಂ ಆಗಿದ್ದಲ್ಲದೇ ಮೂವರ ನಡುವೆ ಮನಸ್ತಾಪವಿತ್ತು. ಜಗಳವಾಡಿದರೆ ಪುಲ್ಲಿ ನಮ್ಮನ್ನು ಮುಗಿಸಿ ಬಿಡುತ್ತಾನೆ ಎಂದು ಆತನನ್ನೇ ಕೊಲೆ ಮಾಡಲು ಸ್ಕೆಚ್ ಹಾಕಿದ್ದರು.

ಪುಲ್ಲಿ ಯಾವಾಗಲೂ ಮಚ್ಚನ್ನು ಜೊತೆಯಲ್ಲಿಯೇ ಇಟ್ಟುಕೊಂಡಿರುತ್ತಿದ್ದ. ಪುಲ್ಲಿ ಬಗ್ಗೆ ಚೆನ್ನಾಗಿ ತಿಳಿದಿದ್ದ ಸಂತೋಷ್ ಹಾಗೂ ಪ್ರೀತಂ ಚಿಕ್ಕಮಗಳೂರಿಗೆ ಟ್ರಿಪ್ ಹೋಗೋಣ ಎಂದು ಫೆ.9 ರಂದು ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ತೆರಳಿದ್ದರು. ಈ ವೇಳೆ ಪುಲ್ಲಿಯನ್ನು ಹತ್ಯೆ ಮಾಡಿದ್ದರು ಎಂದು ತಿಳಿದು ಬಂದಿದೆ.

ಪುಲ್ಲಿ ಮದ್ಯದ ಅಮಲಿನಲ್ಲಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಪ್ರೀತಮ್ ಹಾಗೂ ಕೀರ್ತಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ನಂತರ ಪ್ರಕರಣವನ್ನು ಮುಚ್ಚಿ ಹಾಕಲು ಕೊಲೆ ಮಾಡಿದ ಐವತ್ತು ಮೀಟರ್ ದೂರದಲ್ಲಿ ಶವವನ್ನು ಹೂತು ಹಾಕಿದ್ದಾರೆ.

ಗುಂಡಿ ತೆಗೆಯಲು ಮೊದಲೇ ಕಾರಿನಲ್ಲಿ ಗುದ್ದಲಿ ಹಾಗೂ ಹಾರೆಯನ್ನು ತೆಗೆದುಕೊಂಡು ಹೋಗಿದ್ದರು. ತಾವು ಅಂದುಕೊಂಡಂತೆ ಪುಲ್ಲಿ ಕಥೆ ಮುಗಿಸಿ ವಾಪಾಸ್ ಹಾಸನಕ್ಕೆ ಬಂದು ಎಂದಿನಂತೆ ಓಡಾಡಿಕೊಂಡಿದ್ದರು.

ಪುಲ್ಲಿ ಎಲ್ಲೇ ಹೋದರೂ ಒಂದು ವಾರದ ನಂತರ ಮನೆಗೆ ಬರುತ್ತಿದ್ದ. ಆದರೆ ಹದಿನೈದು ದಿನಗಳು ಕಳೆದರೂ ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ಪ್ರೀತಮ್ ಹಾಗೂ ಕೀರ್ತಿ ಜೊತೆ ಹೋಗಿದ್ದ ಎಂದು ಪೋಷಕರು ಹಾಸನ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೇಸ್ ದಾಖಲಿಸಿಕೊಂಡ ಪೊಲೀಸರು ಪ್ರೀತಮ್ ಹಾಗೂ ಕೀರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಪೊಲೀಸರು ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಒಂದು ಕಾರು ಹಾಗೂ ಮಚ್ಚನ್ನು ವಶಕ್ಕೆ ಪಡೆದಿದ್ದಾರೆ.

Scroll to Top