ಉಡುಪಿ: ಉಡುಪಿ ಜಿಲ್ಲೆಯಲ್ಲಿ ಹೋಳಿ ಹುಣ್ಣಿಮೆ ಹಬ್ಬದ ದಿನವಾದ ಮಂಗಳವಾರ ಮಾರ್ಚ್ 07 ರಂದು ಹೋಳಿ ಹುಣ್ಣಿಮೆ ಆಚರಿಸುವ ವ್ಯಾಪ್ತಿಯ ಶಾಲೆಗಳಿಗೆ ವಿಶೇಷ ರಜೆಯನ್ನು ಘೋಷಿಸಲು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮತಿಸಿದೆ.
ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಹೋಳಿ ಹುಣ್ಣಿಮೆ ಹಬ್ಬವನ್ನು ಮರಾಠಿ ಸಮುದಾಯದ ಜನರು ವಿಶೇಷವಾಗಿ ಆಚರಿಸುತ್ತಿದ್ದು, ಹಬ್ಬದ ದಿನ ಸರಕಾರಿ ರಜೆ ಇಲ್ಲದಿರುವುದರಿಂದ ಹಬ್ಬದ ಆಚರಣೆಗೆ ತೊಡಕಾಗಿತ್ತು, ಈ ಕುರಿತು ಉಡುಪಿ ಶಾಸಕರಾದ ರಘುಪತಿ ಭಟ್ ಅವರು ಮರಾಠಿ ಮತ್ತು ಕುಡುಬಿ ಜನಾಂಗದವರ ವಿನಂತಿಯ ಮೇರೆಗೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ವಿನಂತಿ ಮಾಡಿದ್ದರು.
ಇನ್ನು ಉಡುಪಿ ಶಾಸಕರ ವಿನಂತಿಯನ್ನು ಮನ್ನಿಸಿ ಇದೀಗ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹೋಳಿ ಹುಣ್ಣಿಮೆಯ ಹಬ್ಬದ ದಿನ ವಿಶೇಷ ಸ್ಥಳೀಯ ರಜೆ ಘೋಷಣೆಗೆ ಅನುಮತಿ ನೀಡಿದೆ.