ಉಡುಪಿ: ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಜುಗಾರಿ; ಮೂವರು ಆರೋಪಿಗಳ ಬಂಧನ, ಎರಡು ಪ್ರತ್ಯೇಕ ಪ್ರಕರಣ ದಾಖಲು

ಉಡುಪಿ: ತಾಲೂಕಿನ ಆದಿ ಉಡುಪಿ ಹಾಗೂ ಕಡಿಯಾಳಿ ಪರಿಸರದಲ್ಲಿ ನಡೆದಿರುವ ಎರಡು ಪ್ರತ್ಯೇಕ ಮಟ್ಕಾ ಜುಗಾರಿ ಪ್ರಕರಣದಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಟ್ಕಾ ಜುಗಾರಿ ಆಟಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸರು ಶಿವಳ್ಳಿ ಗ್ರಾಮದ ಕಡಿಯಾಳಿಯ ಮೀನು ಮಾರುಕಟ್ಟೆ ಸಮೀಪ ಮಟ್ಕಾ ಜುಗಾರಿ ಆಟಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಬ್ರಹ್ಮಾವರದ ಹಾರಾಡಿ ಗ್ರಾಮದ ಸಾಲಿಕೇರಿಯ ಗಣಪತಿ (46) ಎಂಬಾತನನ್ನು ಹಾಗೂ ಆದಿಉಡುಪಿಯ ಎಪಿಎಂಸಿ ಮಾರುಕಟ್ಟೆ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಅಂಬಲ ಪಾಡಿಯ ಮಂಜುನಾಥ (38) ಮತ್ತು ಕೊಡವೂರಿನ ಪಾಂದಾರಿ ಪ್ರಸಾದ್ (49) ಎಂಬ ಇಬ್ಬರ ಸಹಿತ ಮೂರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಡಿಯಾಳಿಯ ಪ್ರಕರಣದ ಆರೋಪಿಯಿಂದ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ 940 ನಗದು ಮತ್ತು ಇತರ ವಸ್ತುಗಳು ಹಾಗೂ ಆದಿಉಡುಪಿಯ ಪ್ರಕರಣದ ಆರೋಪಿಗಳಿಂದ 2,440 ರೂ. ನಗದು ಮತ್ತು ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಎರಡು ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Scroll to Top