ಕಣ್ಮಣ ಸೆಳೆಯುವಂತೆ ಸಿಂಗಾರಗೊಳ್ಳುತ್ತಿವೆ ಉಡುಪಿಯ ಮತಗಟ್ಟೆಗಳು : ಮತಗಟ್ಟೆಗಳನ್ನು ಸಿಂಗರಿಸುತ್ತಿದೆ ಜಿಲ್ಲಾಡಳಿತ

ಉಡುಪಿ: ಪ್ರಜಾಪ್ರಭುತ್ವದಲ್ಲಿ ಮತದಾರರರೇ ಪ್ರಭುಗಳು, ಈ ಮತದಾರರ ಪ್ರಭುಗಳು ಚುನಾವಣೆಯಲ್ಲಿ ತಮ್ಮ ,ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಲು ಅವರಿಗೆ ಅಗತ್ಯ ಅರಿವು ಮತ್ತು ಮತದಾನದ ಮಹತ್ವ ಕುರಿತು ತಿಳಿಸಲು , ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ( ಸ್ವೀಪ್) ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಅದರಂತೆ ಉಡುಪಿ ಜಿಲ್ಲೆಯಲ್ಲಿ ಮತಗಟ್ಟೆಗಳು ಕಣ್ಮಣ ಸೆಳೆಯುವಂತೆ ಸಿಂಗಾರಗೊಳ್ಳುತ್ತಿದ್ದು, ಮತದಾರರನ್ನು ಮತದಾನ ಕೇಂದ್ರಗಳತ್ತ ಆಕರ್ಷಿಸುತ್ತಿವೆ.

ಕೇಂದ್ರ ಚುನಾವಣಾ ಆಯೋಗವು ಮತದಾನ ದಿನವನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸಲು ಕರೆ ನೀಡಿದ್ದು, ಮತದಾನದ ದಿನದಂದು ಮತಗಟ್ಟೆಗಳನ್ನು ಆಕರ್ಷಕ ರೀತಿಯಲ್ಲಿ ಸಿಂಗರಿಸುವಂತೆ ನಿರ್ದೇಶನ ನೀಡಿದೆ. ಆದರೆ ಉಡುಪಿಯಲ್ಲಿ ಜಿಲ್ಲಾ ಸ್ವೀಪ್ ಸಮಿತಿಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಪ್ರಯುಕ್ತ ಜಿಲ್ಲೆಯಲ್ಲಿನ ಒಟ್ಟು 1111 ಮತಗಟ್ಟೆಗಳನ್ನು ಜಿಲ್ಲೆಯ ಸಾಂಪ್ರದಾಯಿಕ ಕಲೆ,ಸಂಸ್ಕೃತಿ, ವೈಭವವನ್ನು ಬಿಂಬಿಸುವ ಚಿತ್ರಗಳನ್ನು ರಚಿಸುವ ಗುರಿ ಹೊಂದಿದ್ದು, ಆ ಮೂಲಕ ಮತಗಟ್ಟೆಗಳನ್ನು ಅತ್ಯಂತ ಆಕರ್ಷಕವಾಗಿ ಸಿಂಗರಿಸಲಾಗುತ್ತಿದೆ.

ಜಿಲ್ಲೆಯ ಚಿತ್ರಕಲಾ ಶಿಕ್ಷಕರ ಮೂಲಕ ಎಲ್ಲಾ 1111 ಮತಗಟ್ಟೆಗಳಲ್ಲಿ ಯಕ್ಷಗಾನ, ಕಂಬಳ, ಉಡುಪಿ ಸೀರೆ, ವರ್ಲಿ ಚಿತ್ರಕಲೆ ಸೇರಿದಂತೆ ಜಿಲ್ಲೆಯ ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಚಿತ್ರಗಳ ರಚನೆಯಲ್ಲಿ ತೊಡಗಿದೆ. ಈ ಬಗ್ಗೆ ಪ್ರಾಯೋಗಿಕವಾಗಿ ಇತ್ತೀಚೆಗೆ ಉಡುಪಿಯ ಹನುಮಂತನಗರ ಶಾಲೆಯಲ್ಲಿನ 5 ಮತಗಟ್ಟೆಗಳನ್ನು, 30 ಕ್ಕೂ ಅಧಿಕ ಚಿತ್ರಕಲಾ ಶಿಕ್ಷಕರು ಒಂದೇ ದಿನದಲ್ಲಿ ಚಿತ್ರಕಲೆಯ ಮೂಲಕ ಸಿಂಗರಿಸಿದ್ದು, ಇದು ನೋಡುಗರ ಕಣ್ಮನ ಸೆಳೆಯುತ್ತಿದೆ. ಈ ಮತದಾನ ಕೇಂದ್ರಗಳಲ್ಲಿ ಚಿತ್ರ ಬಿಡಿಸುವ ಕಾರ್ಯದಲ್ಲಿ ಸರ್ಕಾರಿ ಶಾಲೆಗಳ ಚಿತ್ರಕಲಾ ಶಿಕ್ಷಕರು ಹಾಗೂ ಕೆಲ ಅನುದಾನಿತ ಶಾಲಾ ಶಿಕ್ಷಕರು ಭಾಗವಹಿಸಿದ್ದು, ಯಾವುದೇ ಪ್ರತಿಫಲಾಕ್ಷೆಯಿಲ್ಲದೆ , ಈ ಕಾರ್ಯವನ್ನು ಚುನಾವಣಾ ಕರ್ತವ್ಯ ಎಂಬಂತೆ, ಅತ್ಯಂತ ಶ್ರದ್ದೆಯಿಂದ ತಮಗೆ ವಹಿಸಿದ ಕಾರ್ಯವನ್ನು ಸಂಪೂರ್ಣಗೊಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳನ್ನು ಈ ರೀತಿಯಾಗಿ ಸಿಂಗರಿಸಲು ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಮತ್ತು ಅನುದಾನ ರಹಿತ ಚಿತ್ರಕಲಾ ಶಿಕ್ಷಕರನ್ನು ಈ ಕಾರ್ಯದಲ್ಲಿ ಬಳಸಿಕೊಳ್ಳುವ ಉದ್ದೇಶವಿದೆ. ಚುನಾವಣಾ ಆಯೋಗವು ಎಲ್ಲಾ ಜಿಲ್ಲೆಗಳ ಪ್ರತಿ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯನ್ನು ಸ್ಥಳೀಯ ಸಾಂಪ್ರದಾಯಿಕ ರೀತಿಯಲ್ಲಿ ಸಿಂಗರಿಸುವಂತೆ ತಿಳಿಸಿದೆ. ಆದರೇ ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ತಮ್ಮ ವಿನೂತನ ಕಲ್ಪನೆಯಡಿಯಲ್ಲಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳನ್ನು ಜಿಲ್ಲೆಯ ವಿವಿಧ ಕಲೆ ಸಂಸ್ಕೃತಿ ಆಚರಣೆ ಬಿಂಬಿಸುವ ಚಿತ್ರಗಳನ್ನು ಬಿಡಿಸುವ ಕಾರ್ಯವನ್ನು ಆಯೋಜಿಸುವ ಮೂಲಕ ಅದನ್ನು ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದಾರೆ.

ಚುನಾವಣೆಯಲ್ಲಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು , ಪ್ರತಿಯೊಂದು ಮತವೂ ನಿರ್ಣಾಯಕವಾಗಿದ್ದು, ಎಲ್ಲಾ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವಿನೂತನ ಕಾರ್ಯಕ್ರಮಗಳ ಮೂಲಕ ಅರಿವು ಮತ್ತು ಜಾಗೃತಿ ಮೂಡಿಸಲಾಗುತ್ತಿದೆ. ಅದರ ಅಂಗವಾಗಿ ಜಿಲ್ಲೆಯ ಎಲ್ಲಾ 1111 ಮತಗಟ್ಟೆಗಳನ್ನು ಜಿಲ್ಲೆಯ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಆಕರ್ಷಕ ಚಿತ್ರಗಳನ್ನು ಬಿಡಿಸುವ ಉದ್ದೇಶವಿದ್ದು, ಈ ಮೂಲಕ, ಮತದಾರರ ಗಮನವನ್ನು ಮತಗಟ್ಟೆಯ ಕಡೆಗೆ ಸೆಳೆಯುವ ಮೂಲಕ ಮತದಾನ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವಂತೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಈ ವಿನೂತನ ಪ್ರಯತ್ನಕ್ಕೆ ಜಿಲ್ಲೆಯ ಚಿತ್ರಕಲಾ ಶಿಕ್ಷಕರು ಉತ್ತಮ ಸಹಕರ ನೀಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ತಿಳಿಸಿದ್ದಾರೆ…

Scroll to Top