ಕಾಪು: ಇಲ್ಲಿನ ಮಾಜಿ ಶಾಸಕ-ಸಚಿವ ವಿನಯ್ ಕುಮಾರ್ ಸೊರಕೆಯ ಶಿಫಾರಸ್ಸಿನ ಮೇರೆಗೆ ಮಂಜೂರಾತಿಯಾಗಿದ್ದ ಕಾಪು ತಾಲ್ಲೂಕು ಆಡಳಿತ ಕಚೇರಿ ಮಿನಿ ವಿಧಾನಸೌಧದ ಕಾಮಗಾರಿ ಪೂರ್ಣಗೊಂಡು ಇದೀಗ ಉದ್ಘಾಟನೆಗೆ ಸಜ್ಜುಗೊಂಡಿದೆ.
ಕಾಪು ಪಡುಗ್ರಾಮ ಬಂಗ್ಲೆ ಮೈದಾನದ 3.42 ಎಕರೆ ಜಮೀನಿನಲ್ಲಿ ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿ ಒಟ್ಟು 2,857 ಚ.ಮೀ. ವಿಸ್ತಿರ್ಣದ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು 10 ಕೋಟಿ ರೂ. ಯೋಜನಾ ವೆಚ್ಚವಾಗಿದೆ.
ವಿವಿಧ ಕಚೇರಿಗಳು
ಕಾಪು ತಾಲೂಕಿನಲ್ಲಿ ಪ್ರಸ್ತುತ ಪುರಸಭೆ, ಪೊಲೀಸ್, ಕಂದಾಯ, ಚುನಾವಣೆ, ಗ್ರಾಮೀಣಾಭಿವೃದ್ಧಿ ಇಲಾಖೆ, ತಾ.ಪಂ., ಅರಣ್ಯ, ಆರೋಗ್ಯ, ಕೃಷಿ ಇಲಾಖೆ ಮತ್ತು ಉಪ ಖಜಾನೆ ಕಾರ್ಯಾಚರಿಸುತ್ತಿದ್ದು ಶಾಸಕರ ಕಚೇರಿ, ತಹಶೀಲ್ದಾರ್ ಕಚೇರಿ, ಸರ್ವೇ ಇಲಾಖೆ, ಉಪನೋಂದಣಿ ಕಚೇರಿ, ಭೂಮಿ, ತಾಲೂಕು ದಂಡಾಧಿಕಾರಿ ನ್ಯಾಯಾಲಯ ಸಹಿತ ಸುಮಾರು 30 ಇಲಾಖೆಗಳ ಕಚೇರಿಗಳು ಮಿನಿ ವಿಧಾನಸೌಧದ ಸಂಕೀರ್ಣದೊಳಗೆ ಬರಲಿವೆ. ಮಿನಿ ವಿಧಾನಸೌಧ ಕಟ್ಟಡದಲ್ಲಿ 8 ಜನ ಸಾಮರ್ಥಯದ ಲಿಫ್ಟ್, 25 ಸಾವಿರ ಲೀಟರ್ ಸಾಮರ್ಥಯದ ಸಂಪ್ ಟ್ಯಾಂಕ್, ಡಿಸೇಲ್ ಜನರೇಟರ್, ಕಾರಿಡಾರ್, ವಿವಿಧ ಕಚೇರಿಗಳು, ಕೋರ್ಟ್ ಹಾಲ್, ಮೀಟಿಂಗ್ ಹಾಲ್ ಹಾಗೂ ಆಕರ್ಷಕ ವಿನ್ಯಾಸಗಳು ಕಟ್ಟಡದ ಸೊಬಗು ಹೆಚ್ಚಿಸಿವೆ.
ರೆಕಾರ್ಡ್ ರೂಂ, ಶಿಕ್ಷಣ, ಲೋಕೋಪಯೋಗಿ, ಜಿ.ಪಂ. ಇಂಜಿನಿಯರಿಂಗ್, ತೋಟಗಾರಿಕೆ, ಸಮಾಜಕಲ್ಯಾಣ, ಶಿಶು ಅಭಿವೃದ್ಧಿ, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ರೇಷ್ಮೆ ಇಲಾಖೆ, ಬಂದರು ಮತ್ತು ಮೀನುಗಾರಿಕೆ, ಯುವಜನ ಮತ್ತು ಕ್ರೀಡಾ ಇಲಾಖೆ, ವಕ್ ಬೋರ್ಡ್, ಧಾರ್ಮಿಕ ದತ್ತಿ ಇಲಾಖೆ, ಸಮಗ್ರ ಗಿರಿಜನ ಅಭಿವೃದ್ಧಿ ನಿಗಮ, ಆರ್‌ಟಿಒ ಕಚೇರಿ ಹಾಗೂ ಲೀಡ್ ಬ್ಯಾಂಕ್ ಶಾಖೆಗಳ ತಾಲೂಕು ಮಟ್ಟದ ಕಚೇರಿಗಳು ಇನ್ನಷ್ಟೇ ಕಾಪುವಿಗೆ ಬರಬೇಕಿದ್ದು ಮಿನಿ ವಿಧಾನಸೌಧ ಉದ್ಘಾಟನೆಗೊಳ್ಳುವಾಗಲೇ ತಾಲೂಕಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳೂ ಕಾಪುವಿಗೆ ಬರುವಂತಾದರೆ ಉತ್ತಮ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿತ್ತು ಆದರೆ ಈ ಬಗ್ಗೆ ಹಾಲಿ ಶಾಸಕ ಹೆಚ್ಚಿನ ಗಮನವಹಿಸಿದ್ದರೆ ಈ ಎಲ್ಲಾ ಕಚೇರಿಯ ಕಾಪುವಿಗೆ ಬರುತ್ತಿತ್ತು ಆದರೆ ವಿಪರ್ಯಾಸವೆಂದರೆ ಪ್ರಯತ್ನ ಪಡದಿರುವುದಾಗಿದೆ.