ಹಾಸನ: ಎಲ್ಲೆಡೆ ಆತಂಕ ಸೃಷ್ಟಿಸಿರುವ ಹೆಚ್3ಎನ್2 ಸೋಂಕಿಗೆ ರಾಜ್ಯದಲ್ಲಿ ಮೊದಲ ಬಲಿಯಾಗಿದೆ.
ಅನಾರೋಗ್ಯದಿಂದ ಮೃತಪಟ್ಟಿದ್ದ 83 ವರ್ಷದ ವೃದ್ಧನಿಗೆ ಹೆಚ್3ಎನ್2 ವೈರಸ್ ತಗುಲಿದ್ದುದು ದೃಢಪಟ್ಟಿದೆ.
ಹಾಸನ ಜಿಲ್ಲೆ, ಆಲೂರು ತಾಲೂಕಿನ ವೃದ್ಧನಿಗೆ ಸೋಂಕು ತಗುಲಿದ್ದುದು ತಡವಾಗಿ ಬೆಳಕಿಗೆ ಬಂದಿದೆ.
ವೃದ್ಧ ಜ್ವರ, ಗಂಟಲು ನೋವು, ಕೆಮ್ಮಿನಿಂದ ಬಳಲುತ್ತಿದ್ದು, ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಾರ್ಚ್ 1 ರಂದು ಆಲೂರಿನಲ್ಲಿ ವೃದ್ಧ ಮೃತಪಟ್ಟಿದ್ದರು. ಮೃತ ವ್ಯಕ್ತಿಗೆ ಮಾರಣಾಂತಿಕ ಸೋಂಕು ಇದ್ದುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಡಿಎಚ್ಓ ಡಾ.ಶಿವಸ್ವಾಮಿ ತಿಳಿಸಿದ್ದಾರೆ.
ಮೃತ ವ್ಯಕ್ತಿಯ ಗ್ರಾಮದ ಸುತ್ತಮುತ್ತಲ ಹಳ್ಳಿಯಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತ ಜನರ ಹಾಗೂ ವೃದ್ಧರ ಆರೋಗ್ಯ ತಪಾಸಣೆ ನಡೆಸುತ್ತಿದೆ. ಗ್ರಾಮಸ್ಥರ ಗಂಟಲು ದ್ರವವನ್ನು ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸಿರುವುದಾಗಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ