‘ಮಾಹಿತಿ ಗೊತ್ತಿಲ್ಲದೇ ಸಾರ್ವಜನಿಕವಾಗಿ ಮಾತಾನಾಡೋದು ಯಾಕೆ’..!? ಕಾಂಗ್ರೆಸ್ ಮುಖಂಡ ಮಿಥುನ್ ರೈ ರನ್ನು ತರಾಟೆಗೆ ತೆಗೆದುಕೊಂಡ ನಟ ರಕ್ಷಿತ್ ಶೆಟ್ಟಿ

ಉಡುಪಿ ದೇಗುಲಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಪಕ್ಷದ ಮುಖಂಡ ಮಿಥುನ್ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಉಡುಪಿ ದೇಗುಲಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಮರು ಎಂದು ಮಿಥುನ್ ರೈ ಹೇಳಿದ್ದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಪರ ವಿರೋಧದ ಮಾತುಗಳು ಕೇಳಿ ಬಂದಿದ್ದವು. ಸಾವಿರಾರು ವರ್ಷ ಇತಿಹಾಸವಿರುವ ದೇವಸ್ಥಾನದ ಬಗ್ಗೆ ತಿಳಿದುಕೊಂಡು ಮಾತನಾಡಿ ಎಂದು ಸ್ವತಃ ಸ್ವಪಕ್ಷಿಯರೇ ಕಿವಿಹಿಂಡಿದ್ದರು. ಈ ಪ್ರಕರಣ ಕುರಿತಂತೆ ನಟ ರಕ್ಷಿತ್ ಶೆಟ್ಟಿ ಕೂಡ ಪ್ರತಿಕ್ರಿಯಿಸಿದ್ದಾರೆ.

ಸೋಷಿಯಲ್ ಮೀಡಿಯಾದ ತಮ್ಮ ಖಾತೆಯಲ್ಲಿ ರಕ್ಷಿತ್ ಶೆಟ್ಟಿ ಈ ವಿವಾದದ ಕುರಿತಂತೆ ಬರೆದುಕೊಂಡಿದ್ದು, ಮಿಥುನ್ ರೈ ಹೆಸರನ್ನು ಬಳಸದೇ ತರಾಟೆಗೆ ತಗೆದುಕೊಂಡಿದ್ದಾರೆ. ‘ಉಡುಪಿ ದೇವಸ್ಥಾನಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ. ಮಾಹಿತಿ ಗೊತ್ತಿಲ್ಲದೇ ಸಾರ್ವಜನಿಕವಾಗಿ ನಾನ್ ಸೆನ್ಸ್ ರೀತಿಯಲ್ಲಿ ಮಾತಾನಾಡೋದು ಯಾಕೆ?’ ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಮಿಥುನ್ ರೈ ಹೆಸರು ಬಳಸದೇ ಇದ್ದರೂ, ಇವರಿಗೆ ಕೊಟ್ಟ ಪ್ರತಿಕ್ರಿಯೆ ಎನ್ನುವುದು ಸ್ಪಷ್ಟವಾಗುತ್ತದೆ.

ಸಾಮಾನ್ಯವಾಗಿ ರಾಜಕೀಯ ವ್ಯಕ್ತಿಗಳ ಹೇಳಿಕೆಗಳಿಗೆ ರಕ್ಷಿತ್ ಶೆಟ್ಟಿ ಈವರೆಗೂ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಸ್ವತಃ ತಮ್ಮ ಮೇಲೆಯೇ ಹಲವರು ನೆಗೆಟಿವ್ ಕಾಮೆಂಟ್ ಮಾಡಿದಾಗಲೂ ರಕ್ಷಿತ್ ಮೌನವಹಿಸಿದ್ದರು. ಆದರೆ, ಉಡುಪಿ ಮಠಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದ್ದಾರೆ. ರಕ್ಷಿತ್ ಪೋಸ್ಟ್ ಗೆ ಹಲವರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

Scroll to Top