ಶಿರ್ವ: ಪೊಲೀಸ್ ಠಾಣೆಯ ವ್ಯಾಪ್ತಿಯ ಕುರ್ಕಾಲು ಮತ್ತು ಬಂಟಕಲ್ಲಿನಲ್ಲಿ 2020ರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಬಾಗಲಕೋಟೆಯ ಬಿಲ್ಕೆನೂರು ಜುಮ್ಮಾ ಮಸೀದಿ ಬಳಿಯ ನಿವಾಸಿ ವಿಜಯ ಹುಲಗಪ್ಪ ವಡ್ಡರ್ ಪ್ರೊಕ್ಲಮೇಶನ್ ವಾರೆಂಟ್ ಆರೋಪಿಯನ್ನು ಶಿರ್ವ ಪೊಲೀಸ್ ಉಪನಿರೀಕ್ಷಕರಾದ ರಾಘವೇಂದ್ರ ಸಿ. (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಅನಿಲ್ ಕುಮಾರ್ ಟಿ. ನಾಯ್ಕ(ತನಿಖೆ) ಅವರ ಮಾರ್ಗದರ್ಶನದಂತೆ ಎಎಸ್‌ಐ ವಿವೇಕಾನಂದ ಮತ್ತು ಪಿಸಿಗಳಾದ ರಘು ಮತ್ತು ಮಂಜುನಾಥ ನಾಯ್ಕ ಮಾ.10 ರಂದು ಕಾರವಾರದಲ್ಲಿ ಬಂಧಿಸಿ ಕರೆತಂದಿದ್ದಾರೆ.
ಹೆಡ್‌ಕಾನ್‌ಸ್ಟೇಬಲ್ ಭಾಸ್ಕರ್ ಮತ್ತು ಪಿಸಿ ವಿನೋದ್ ಆರೋಪಿಯನ್ನು ಮಾ. 11 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ಮಾ. 13ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯನ್ನು ಹಿರಿಯಡ್ಕ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಈತನ ಮೇಲೆ ಶಿರ್ವ, ಕಾಪು, ವೇಣೂರು, ಮೂಡುಬಿದಿರೆ, ಕಾವೂರು, ಅಂಕೋಲಾ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.