ಉಡುಪಿ(ಮಾ.16): ಎಪಿಎಲ್ ಕಾರ್ಡ್‌ದಾರರಿಗೆ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಅಕ್ಕಿ ಸಿಗುತ್ತಿಲ್ಲ. ಸರಕಾರದಿಂದ ಹಂಚಿಕೆಯೂ ಆಗುತ್ತಿಲ್ಲ. ಸೀಜ್ ಆಗಿರುವ ಅಕ್ಕಿಯನ್ನು ತಾಲೂಕುವಾರು ಎಪಿಎಲ್ ಕಾರ್ಡ್‌ದಾರರಿಗೆ ತಾತ್ಕಾಲಿಕ ವ್ಯವಸ್ಥೆಯಡಿ ವಿತರಿಸುವ ಕಾರ್ಯವನ್ನು ಉಭಯ ಜಿಲ್ಲಾ ಮಟ್ಟದಲ್ಲಿ ಸದ್ಯ ಮಾಡಲಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಪೂರೈಕೆ ಮಾಡುವ ಬಗ್ಗೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಇಲಾಖೆಗೆ ಜಿಲ್ಲೆಗಳಿಂದ ಪ್ರಸ್ತಾವನೆ ಹೋಗಿದೆ. ಆದರೆ, ಖರೀದಿ ಪ್ರಕ್ರಿಯೆ ನಡೆಯದೇ ಇರುವುದರಿಂದ ತಿಂಗಳ ಹಂಚಿಕೆ ಆಗುತ್ತಿಲ್ಲ. ಹೀಗಾಗಿ ಅಕ್ರಮ ಸಾಗಾಟದ ವೇಳೆ ವಶಪಡಿಸಿಕೊಂಡಿರುವ ಅಕ್ಕಿಯನ್ನು ಆಯಾ ತಾಲೂಕುಗಳಲ್ಲೇ ಬೇಡಿಕೆ ಆಧಾರದಲ್ಲಿ ಹಂಚಿಕೆ ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಎಪಿಎಲ್ ಕಾರ್ಡ್ ಅಕ್ಕಿಗೆ ಬೇಡಿಕೆ ಹೆಚ್ಚಿದೆ. ದ.ಕ. ಜಿಲ್ಲೆಯ ಕೆಲವು ತಾಲೂಕುಗಳಲ್ಲೂ ಈ ರೀತಿಯ ಹಂಚಿಕೆ ನಡೆಯುತ್ತಿದೆ ಎಂದು ತಿಳಿಸಿವೆ.