ಮಂಗಳೂರು: ಮಳಲಿ ಮಸೀದಿ ವಿವಾದ ಪ್ರಕರಣ ಸಂಬಂಧಿಸಿದಂತೆ ದರ್ಗಾವಿದ್ದ ಜಾಗದಲ್ಲಿ ಮಂದಿರವಿತ್ತು ಎಂಬ ವಿಚಾರಕ್ಕೆ ಸಂಬಂಧಿಸಿ ಇಂದು ವಿಶ್ವ ಹಿಂದೂ ಪರಿಷತ್ ಮಹಾ ಗಣಯಾಗ ನೆರವೇರಿಸಿದೆ.
ಮಂದಿರ ನಿರ್ಮಾಣಕ್ಕೆ ಗಣಪತಿ ಹೋಮ ಮಾಡುವ ಮೂಲಕ ಸಂಕಲ್ಪ ಮಾಡಿದ್ದಾರೆ.
ದರ್ಗಾವಿದ್ದ ಜಾಗದಲ್ಲಿ ತಂತ್ರಿಗಳು ಈ ಹಿಂದೆ ತಾಂಬೂಲ ಪ್ರಶ್ನೆ ನಡೆಸಿದ್ದರು. ತಾಂಬೂಲ ಪ್ರಶ್ನೆಯಲ್ಲಿ ದೇವಾಲಯ ನಿರ್ಮಾಣಕ್ಕೆ ದೇವರ ಅನುಗ್ರಹ ಬೇಕೆಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರು 108 ಕಾಯಿಯ ಮಹಾ ಗಣಯಾಗ ನೆರವೇರಿಸಿದ್ದಾರೆ.
ವಿಹೆಚ್ಪಿ ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಮಹಾ ಗಣಯಾಗ ನೆರವೇರಿಸಿದೆ. ಈ ಮಹಾ ಗಣಯಾಗದಲ್ಲಿ ಮಂಗಳೂರು ಉತ್ತರ ಶಾಸಕ ಡಾ ಭರತ್ ಶೆಟ್ಟಿ ಭಾಗಿಯಾಗಿದ್ದರು.
ಏನಿದು ಮಳಲಿ ಮಸೀದಿ ವಿವಾದ ಪ್ರಕರಣ..!??
ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿಯಲ್ಲಿ ಮಸೀದಿಯನ್ನು ನವೀಕರಣಕ್ಕೆಂದು ಕೆಡವಿದಾಗ ಹಿಂದೂ ದೇಗುಲ ಹೋಲುವಂತಹ ಆಕೃತಿಯ ವಾಸ್ತುಶಿಲ್ಪದ ಕಟ್ಟಡ ಪತ್ತೆಯಾಗಿತ್ತು. ಬಳಿಕ ಈ ವಿಚಾರ ಬೆಳಕಿಗೆ ಬಂದಂತೆ ಕೋರ್ಟ್ ಮೊರೆಹೋಯಿತು.
ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾವನ್ನು ನವೀಕರಣಕ್ಕಾಗಿ ಕೆಡವಿದಾಗ ಹಿಂದೂ ದೇಗುಲ ಹೋಲುವ ಆಕೃತಿಯ ವಾಸ್ತುಶಿಲ್ಪದ ಕಟ್ಟಡ ಪತ್ತೆಯಾಗಿತ್ತು.