ಮೂಡುಬಿದಿರೆ: ಹಾಡಹಗಲೇ ಮನೆಗಳಿಗೆ ನುಗ್ಗಿ 10 ಲಕ್ಷ ರೂ. ಮೌಲ್ಯದ ಸೊತ್ತು ಕಳವು..!!

ಮೂಡುಬಿದಿರೆ(ಮಾ.20) : ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುವ ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದ್ವಾರದ ಬಳಿಯಲ್ಲಿರುವ ಎರಡು ಮನೆಗಳಿಗೆ ಬೆಳಗ್ಗಿನ ವೇಳೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಚಿನ್ನ, ಬೆಳ್ಳಿಯ ಸೊತ್ತುಗಳು ಮತ್ತು ನಗದನ್ನು ಕಳವು ಮಾಡಿರುವ ಘಟನೆ ಸಂಭವಿಸಿದೆ.

ನಿವೃತ್ತ ಬ್ಯಾಂಕ್‌ ಅಧಿಕಾರಿಗಳಾದ “ಕ್ಷೇಮ’ ಮನೆಯ ರತ್ನಾಕರ ಜೈನ್‌ ಮತ್ತು ಅಲ್ಲೇ ಪಕ್ಕದ “ಸ್ನೇಹ’ ಮನೆಯ ಧೀರೇಂದ್ರ ಹೆಗ್ಡೆ ಅವರು ಕುಟುಂಬ ಸಮೇತ ಪೂಜೆ ಸಲ್ಲಿಸಲು ಬಸದಿಗಳಿಗೆ ತೆರಳಿದ್ದರು.

ಕಳ್ಳರು ರತ್ನಾಕರ ಜೈನ್‌ ಅವರ ಮನೆಯ ಹಿಂಬಾಗಿಲಿನ ಚಿಲಕನ್ನು ಮುರಿದು ಒಳ ಪ್ರವೇಶಿಸಿ 25 ಪವನ್‌ ಚಿನ್ನ ಮತ್ತು 20 ಸಾವಿರ ನಗದು ಹಾಗೂ ಧೀರೇಂದ್ರ ಹೆಗ್ಡೆ ಅವರ ಮುಂಬಾಗಿಲಿನ ಚಿಲಕ ಮುರಿದು 20 ಗ್ರಾಂ ಚಿನ್ನ ಹಾಗೂ 60 ಸಾವಿರ ನಗದನ್ನು ಎತ್ತಿಕೊಂಡಿದ್ದಾರೆ. ಸುಮಾರು 10 ಲಕ್ಷ ರೂ. ಮೊತ್ತದ ಸೊತ್ತು ಕಳವಾಗಿದೆ.

ಪಣಂಬೂರು ಎಸಿಪಿ ಮನೋಜ್‌ ಕುಮಾರ್‌ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂಡುಬಿದಿರೆ ಪೊಲೀಸ್‌ ನಿರೀಕ್ಷಕ ನಿರಂಜನ್‌ ಕುಮಾರ್‌ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ನಡೆದಿರುವ ಈ ಘಟನೆಯ ಹಿಂದೆ ಪರಿಸರವನ್ನು ಚೆನ್ನಾಗಿ ಬಲ್ಲವರ ಕೈವಾಡ ಇದೆಯೆಂದು ಶಂಕಿಸಲಾಗಿದೆ.

Scroll to Top