ಕೇರಳ (ಮಾರ್ಚ್ 21) : ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಕ್ರೈಸ್ತ ಧರ್ಮವನ್ನು ಪಾಲಿಸಿಕೊಂಡು ಬಂದು ಚುನಾವಣೆಗಾಗಿ ತಾನು ಹಿಂದೂ ಎಂದ ಸಿಪಿಎಂ ಶಾಸಕನ ಸದಸ್ಯತ್ವವನ್ನು ಕೇರಳ ಹೈಕೋರ್ಟ್ ರದ್ದುಪಡಿಸಿದೆ.
ಕೇರಳದ ದೇವಿಕುಲಂ ಕ್ಷೇತ್ರದಿಂದ 2021ರ ವಿಧಾನಸಭಾ ಚುನಾವಣೆಯಲ್ಲಿ ವಿಜಯಿಯಾಗಿದ್ದ ಸಿಪಿಎಂ ಅಭ್ಯರ್ಥಿ ಎ ರಾಜಾ ಅವರ ಶಾಸಕತ್ವವನ್ನು ಜನಪ್ರತಿನಿಧಿ ಕಾಯಿದೆ 1951ರ ಅಡಿಯಲ್ಲಿ ಕೇರಳ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ
ದೇವಿಕುಲಂ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ನಾಮಪತ್ರ ಸಲ್ಲಿಸಿದ ವೇಳೆ ರಾಜಾ ಕ್ರೈಸ್ತ ಧರ್ಮಕ್ಕೆ ಸೇರಿದ್ದರಿಂದ ಅವರು ಆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತಿರಲಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ರಾಜಾ ಅವರು ಹಿಂದೂ ಧರ್ಮಕ್ಕೆ ಸೇರಿದ್ದಾಗಿ ಹೇಳಿಕೊಳ್ಳುವಂತಿಲ್ಲ ಎಂದು ನ್ಯಾ. ಪಿ ಸೋಮರಾಜನ್ ಹೇಳಿದರು.
ಪ್ರತಿವಾದಿ ನಾಮಪತ್ರ ಸಲ್ಲಿಸಿದ ವೇಳೆ ಮತ್ತು ಅದಕ್ಕೂ ಬಹಳ ಹಿಂದೆಯೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು ವಾಸ್ತವವಾಗಿ ಕ್ರೈಸ್ತ ಧರ್ಮವನ್ನು ಪ್ರತಿನಿಧಿಸುತ್ತಿದ್ದಾರೆ ಎನ್ನುವ ಸಾಕಷ್ಟು ಆಧಾರಗಳಿವೆ. ಹಾಗಾಗಿ, ಮತಾಂತರದ ನಂತರ ಅವರು ಹಿಂದೂ ಧರ್ಮದ ಸದಸ್ಯ ಎಂದು ಹೇಳಿಕೊಳ್ಳುವಂತಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ನಾಮಪತ್ರ ತಿರಸ್ಕರಿಸಬೇಕಿತ್ತು. ಪ್ರತಿವಾದಿ ಕೇರಳ ರಾಜ್ಯದಲ್ಲಿ ʼಹಿಂದೂ ಪಾರಾಯಣʼದ ಸದಸ್ಯರಲ್ಲ. ಪರಿಶಿಷ್ಟರಿಗೆ ಮೀಸಲಾದ ಕೇರಳ ರಾಜ್ಯದ ವಿಧಾನಸಭೆಗೆ ಆಯ್ಕೆಯಾಗಲು ಅವರು ಅರ್ಹರಲ್ಲ. ಜನ ಪ್ರತಿನಿಧಿ ಕಾಯಿದೆ- 1951ರ ಸೆಕ್ಷನ್ 98ರ ಅಡಿಯಲ್ಲಿ ಅವರ ಶಾಸಕತ್ವ ಅನೂರ್ಜಿತಗೊಂಡಿದೆ ಎಂದು ತೀರ್ಪು ಘೋಷಿಸಿದೆ.
ತಾವು ಸ್ಪರ್ಧಿಸಿದ್ದ ಕ್ಷೇತ್ರ ಎಸ್‌ಸಿ ಸಮುದಾಯದ ಅಭ್ಯರ್ಥಿಗಳಿಗೆ ಮೀಸಲಾಗಿದೆ ಎಂದು ಕ್ರೈಸ್ತ ಧರ್ಮಕ್ಕೆ ಸೇರಿದ ರಾಜಾ ಅವರ ಆಯ್ಕೆ ಪ್ರಶ್ನಿಸಿ ಕಾಂಗ್ರೆಸ್ ಅಭ್ಯರ್ಥಿ ಡಿ ಕುಮಾರ್ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.