ಕಾಪು: ಇಲ್ಲಿನ ಹಳೇ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಯಲ್ಲಿ ತುಳುನಾಡಿನ ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಮಂಗಳವಾರ ಸಂಜೆ ವೈಭವದ ಚಾಲನೆ ದೊರಕಿದ್ದು, ಬುಧವಾರ ಸಂಜೆಯ ವರೆಗೆ ಮುಂದುವರಿಯಲಿದೆ.
ಮಂಗಳವಾರ ರಾತ್ರಿ ಹಳೇ ಮಾರಿಗುಡಿಗೆ ಶ್ರೀ ವೆಂಕಟರಮಣ ದೇವಸ್ಥಾನ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಮಾರಿಯಮ್ಮ ದೇವಿಯ ಸ್ವರ್ಣಾಭರಣಗಳನ್ನು ಮೆರವಣಿಗೆಯ ಮೂಲಕ ತಂದು, ಬಳಿಕ ಹೊಂಗಾರಕನ ಮರದಲ್ಲಿ ಕೆತ್ತಿದ ಮೂರ್ತಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿ, ವಿವಿಧ ಪೂಜಾ ವಿಧಿವಿಧಾನ ನೆರವೇರಿಸಲಾಯಿತು.
ಮಂಗಳವಾರ ಮಧ್ಯರಾತ್ರಿಯ ಬಳಿಕ ದರ್ಶನ ಸೇವೆ ನಡೆದು, ಬುಧ ವಾರ ಮಧ್ಯಾಹ್ನದ ವರೆಗೆ ಭಕ್ತರಿಗೆ ಮಾರಿಯಮ್ಮ ದೇವಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಬುಧವಾರದ ಮಧ್ಯಾಹ್ನ ಪೂಜೆ ನಡೆದು, ಸಂಜೆ ದರ್ಶನ ಸೇವೆ ನಡೆಯುತ್ತದೆ. ಅಭಯ ಪ್ರಸಾದ ವಿತರಣೆ ಬಳಿಕ ದೇವಿಯ ಮೂರ್ತಿಯನ್ನು ಮೆರವಣಿಗೆಯಲ್ಲಿ ಒಯ್ದು, ವಿಸರ್ಜಿಸಲಾಗುತ್ತದೆ.
ಮಾರಿಯಮ್ಮನ ಸನ್ನಿಧಿಯಲ್ಲಿ ಗದ್ದಿಗೆಪೂಜೆ ವಿಶೇಷವಾಗಿದ್ದು, ಹೂವಿನ ಪೂಜೆ, ಕುಂಕುಮಾರ್ಚನೆ ಸಹಿತ ವಿವಿಧ ಸೇವೆಗಳು, ಹರಕೆಗಳು ಸಮರ್ಪಿಸಲ್ಪಡುತ್ತವೆ. 3 ಮಾರಿಗುಡಿ ಗಳನ್ನೂ ವಿಶೇಷವಾಗಿ ಅಲಂಕರಿಸಲಾಗಿದೆ. ಸುಮಾರು 200ಕ್ಕೂ ಅಧಿಕ ಮಾರಾಟ ಮಳಿಗೆ ಗಳು ಆಕರ್ಷಿಸುತ್ತಿವೆ.