ಕಾರ್ಕಳ (ಮಾರ್ಚ್ 23) : ಮೇಣದ ಬತ್ತಿ ತಯಾರಿಕಾ ಘಟಕದಲ್ಲಿ ಉಂಟಾದ ಅಗ್ನಿ ಆಕಸ್ಮಿಕಕ್ಕೆ ಇಡೀ ಕಾರ್ಖಾನೆ ಸುಟ್ಟು ಭಸ್ಮವಾದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅತ್ತೂರು ಪರ್ಪಲೆಗುಡ್ಡೆ ಎಂಬಲ್ಲಿ ನಡೆದಿದೆ.
ಈ ಘಟನೆಯಲ್ಲಿ ಮೇಣದ ಬತ್ತಿ ತಯಾರಿಕಾ ಘಟಕ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು ಸುಮಾರು 25 ಲಕ್ಷ ರೂಪಾಯಿಗೂ ಮಿಕ್ಕಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಅತ್ತೂರು ಚರ್ಚಿಗೆ ಸೇರಿದ್ದ ಪರ್ಪಲೆ ಗುಡ್ಡದಲ್ಲಿರುವ ಮೇಣದ ಬತ್ತಿ ತಯಾರಿಕಾ ಘಟಕದ ಇಡೀ ಕಟ್ಟಡ, ಯಂತ್ರೋಪಕರಣಗಳು ಹಾಗೂ ಮೇಣದ ಬತ್ತಿ ತಯಾರಿಕೆಗೆ ದಾಸ್ತಾನು ಇರಿಸಲಾಗಿದ್ದ ಅಪಾರ ಪ್ರಮಾಣದ ಮೇಣ ಹಾಗೂ ಉತ್ಪಾದನೆಯಾಗಿದ್ದ ಮೇಣದ ಬತ್ತಿಗಳು ಬೆಂಕಿಯ ಕೆನ್ನಾಲಗೆಗೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಸಾಯಂಕಾಲ ಏಕಾಎಕಿ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಘಟಕವನ್ನು ವ್ಯಾಪಿಸಿದೆ. ತಕ್ಷಣವೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಎರಡು ಅಗ್ನಿಶಾಮಕ ದಳದ ವಾಹನಗಳು ಘಟನಾಸ್ಥಳಕ್ಕೆ ಬಂದರೂ ಬೆಂಕಿ ಬಹುತೇಕ ಘಟಕವನ್ನು ವ್ಯಾಪಿಸಿದ ಹಿನ್ನಲೆಯಲ್ಲಿ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.