ಬಿ.ಎಸ್.ವೈ ಬದಲು ವಿಜಯೇಂದ್ರನಿಂದಲೇ ಹೂಗುಚ್ಛ ಸ್ವೀಕರಿಸಿ ಬೆನ್ನು ತಟ್ಟಿದ ಅಮಿತ್ ಶಾ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ತಂತ್ರ ರೂಪಿಸಲು ಬೆಂಗಳೂರಿಗೆ ಆಗಮಿಸಿರುವ ಚುನಾವಣಾ ಚಾಣಕ್ಯ ಅಮಿತ್ ಶಾ, ಫುಲ್ ಬ್ಯುಸಿ ಇದ್ದಾರೆ. ನಿನ್ನೆ ರಾತ್ರಿಯಿಂದಲೇ ತಮ್ಮ ರಾಜಕೀಯ ತಂತ್ರಗಾರಿಕೆ ಶುರುಮಾಡಿರುವ ಅಮಿತ್ ಶಾ, ಇಂದು ಬೆಳಗ್ಗೆ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ದೌಡಾಯಿಸಿ ರಾಜ್ಯ ಬಿಜೆಪಿ ನಾಯಕರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.

ಕುಮಾರಕೃಪಾ ರಸ್ತೆಯಲ್ಲಿರುವ ನಿವಾಸಕ್ಕೆ ಅಮಿತ್ ಶಾ ಆಗಮಿಸಿದ್ದು, ಅಲ್ಲಿಯೇ ಉಪಹಾರ ಸೇವಿಸಿದರು. ಈ ವೇಳೆ ಅಪರೂಪದ ಪ್ರಸಂಗವೊಂದು ನಡೆದಿದ್ದು, ಅದು ಬಿಜೆಪಿಯ ಪ್ರಮುಖರನ್ನು ಹುಬ್ಬೇರುವಂತೆ ಮಾಡಿತು. ಹೌದು.. ಅಮಿತ್ ಶಾ ಕಾರಿನಿಂದ ಇಳಿದು ಬರುತ್ತಿದ್ದಂತೆಯೇ ಅವರನ್ನು ಸ್ವಾಗತಿಸಲು ಬಿ.ವೈ.ವಿಜಯೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ ನಿವಾಸದ ಮುಂದೆ ನಿಂತಿದ್ದರು.

ಮನೆಯೊಳಗೆ ಅಮಿತ್ ಶಾ ಎಂಟ್ರಿ ಆಗುತ್ತಿದ್ದಂತೆಯೇ ಬಿಎಸ್ವೈ ಹೂವಿನ ಗುಚ್ಛ ಹಿಡಿದು ಅಮಿತ್ಶಾರನ್ನು ಸ್ವಾಗತಿಸಲು ಮುಂದಾಗಿದ್ದರು. ಆಗ ಅಮಿತ್ ಶಾ, ಬಿಎಸ್ವೈರನ್ನು ತಡೆದು ಹೂವಿನ ಬೊಕ್ಕೆಯನ್ನು ವಿಜಯೇಂದ್ರ ಬಳಿ ಕೊಡುವಂತೆ ಸೂಚನೆ ನೀಡಿದರು. ಅಮಿತ್ ಶಾ ನೀಡಿದ ಸೂಚನೆಯಂತೆ ವಿಜಯೇಂದ್ರ, ಬಿಎಸ್ವೈ ಬಳಿಯಿದ್ದ ಹೂ-ಗುಚ್ಛವನ್ನು ಪಡೆದು ಸ್ವಾಗತ ನೀಡಿದರು. ಆಗ ಅಮಿತ್ ಶಾ ವಿಜಯೇಂದ್ರ ಅವರ ಬೆನ್ನುತಟ್ಟಿದರು. ನಂತರ ಮನೆಯೊಳಗೆ ಅತಿಥಿ ಅಮಿತ್ ಶಾರನ್ನು ಕರೆದುಕೊಂಡು ಹೋದರು.


ಈ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವ ಗೋವಿಂದ್ ಕಾರಜೋಳ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇದ್ದರು. ವಿಜಯೇಂದ್ರ ಅವರ ಬಳಿಯಿಂದ ಹೂ-ಗುಚ್ಛ ಸ್ವೀಕರಿಸಲು ಅಮಿತ್ ಶಾ ನಿರ್ಧರಿಸಿರೋದ ಇದೀಗ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಈಗಾಗಲೇ ವಿಜಯೇಂದ್ರ ವಿರುದ್ಧ ಕೆಲವು ಬಿಜೆಪಿ ನಾಯಕರಲ್ಲಿ ಅಸಮಾಧಾನ ಇದೆ. ಈಗಾಗಲೇ ಕೆಲವು ನಾಯಕರು ವಿಜಯೇಂದ್ರ ವಿರುದ್ಧ ಹೈಕಮಾಂಡ್ಗೆ ದೂರು ಕೂಡ ನೀಡಿದ್ದಾರೆ. ಹೀಗಿರುವಾಗ ವಿಜಯೇಂದ್ರ ವಿರೋಧಿಗಳಿಗೆ ಹೈಕಮಾಂಡ್ ಅಮಿತ್ ಶಾ ಹೊಸ ಸಂದೇಶ ರವಾನಿಸಿದ್ದಾರಾ ಎಂಬ ಚರ್ಚೆ ಶುರುವಾಗಿದೆ.

Scroll to Top