ಶ್ರೀನಗರ: ಭಗವಾನ್ ಶ್ರೀರಾಮ ಕೇವಲ ಹಿಂದೂಗಳಿಗಷ್ಟೇ ದೇವರಲ್ಲ. ಮುಸಲ್ಮಾನ್, ಕ್ರಿಶ್ಚಿಯನ್ನರಿಗೂ ದೇವರು. ಅಲ್ಲಾ ಕೂಡ ಅಷ್ಟೇ ಬರೀ ಮುಸ್ಲಿಂರ ದೇವರಲ್ಲ. ಎಲ್ಲರ ದೇವರು. ಶ್ರೀರಾಮನನ್ನು ಜನರಿಗೆ ಸರಿ ದಾರಿ ತೋರಿಸಲು ಅಲ್ಲಾನೇ ಕಳುಹಿಸಿದನು. ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾಶ್ಮೀರದ ಉಧಮ್‌ಪುರ್‌ನಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆ ಆಯೋಜಿಸಲಾಗಿತ್ತು. ಈ ಱಲಿಯನ್ನುದ್ದೇಶಿಸಿ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡಿಸಿದ್ದಾರೆ.
ಪಾಕಿಸ್ತಾನ ಲೇಖಕನ ಹೇಳಿಕೆಯನ್ನು ಉಲ್ಲೇಖಿಸಿದ ಫಾರೂಕ್ ಅಬ್ದುಲ್ಲಾ, ಶ್ರೀರಾಮ ಕೇವಲ ಹಿಂದೂಗಳ ದೇವರಲ್ಲ. ಈ ಕಲ್ಪನೆಯನ್ನು ನಿಮ್ಮ ಮನಸ್ಸಿನಿಂದ ಮೊದಲು ಕಿತ್ತು ಹಾಕಬೇಕು. ಭಗವಾನ್ ಶ್ರೀರಾಮ ಪ್ರತಿಯೊಬ್ಬರಿಗೂ ದೇವರು. ಅದು ಮುಸಲ್ಮಾನರಾಗಿರಲಿ, ಕ್ರಿಶ್ಚಿಯನ್ ಆಗಿರಲಿ. ಎಲ್ಲರಿಗೂ ರಾಮ ದೇವರು ಎಂದು ತಿಳಿಸಿದ್ದಾರೆ.
ಅಯೋಧ್ಯೆ ಭವ್ಯ ರಾಮಮಂದಿರದ ಬಗ್ಗೆ ಪರೋಕ್ಷವಾಗಿ ಮಾತನಾಡಿರುವ ಫಾರೂಕ್ ಅಬ್ದುಲ್ಲಾ, ರಾಮನ ಭಕ್ತರು ಎಂದು ನಿಮ್ಮ ಬಳಿಗೆ ಬರುವವರನ್ನ ನಂಬಬೇಡಿ. ಅವರು ಮೂರ್ಖರು. ರಾಮನ ಹೆಸರಿನಲ್ಲಿ ಲಾಭ ಮಾಡಿಕೊಳ್ಳಲು ಅವರು ಬಯಸುತ್ತಾರೆ. ಅವರಿಗೆ ರಾಮನ ಮೇಲೆ ಭಕ್ತಿ ಇಲ್ಲ. ಅವರು ಅಧಿಕಾರಕ್ಕಾಗಿ, ಮತಕ್ಕಾಗಿ ರಾಮನನ್ನೇ ಮಾರುತ್ತಿದ್ದಾರೆ. ಅವರಿಗೆ ಅಧಿಕಾರದ ಮೇಲೆ ವ್ಯಾಮೋಹ ಇದೆ. ಜನರ ಗಮನ ಬೇರೆ ಕಡೆ ಸೆಳೆಯಲು ಚುನಾವಣೆಯ ಸಮಯಕ್ಕೆ ಸರಿಯಾಗಿ ರಾಮ ಮಂದಿರವನ್ನು ಉದ್ಘಾಟಿಸುತ್ತಿದ್ದಾರೆ ಎಂದಿದ್ದಾರೆ