ಉಡುಪಿ (ಮಾರ್ಚ್ 25) : ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮಾರ್ಚ್ 31 ರಿಂದ ಏಪ್ರಿಲ್ 15 ರ ವರೆಗೆ ನಡೆಯಲಿದ್ದು, ಈ ಬಾರಿ ಜಿಲ್ಲೆಯಲ್ಲಿ ಒಟ್ಟು 13,753 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ 55 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಪರೀಕ್ಷೆಗಳು ಸುಗಮವಾಗಿ ನಡೆಯಲು ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಸೂಚನೆ ನೀಡಿದರು. ಅವರು ಇಂದು ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ, ಎಸ್.ಎಸ್.ಎಲ್.ಸಿ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಾಗಿ ರೆಗ್ಯೂಲರ್, ಖಾಸಗಿ ಮತ್ತು ಪುನಾರಾವರ್ತಿತ ಸೇರಿದಂತೆ 7185 ಬಾಲಕರು ಮತ್ತು 6568 ಬಾಲಕಿಯರು ಸೇರಿದಂತೆ ಒಟ್ಟು 13753 ವಿದ್ಯಾರ್ಥಿಗಳು ಹಾಜರಾಗಲಿದ್ದು, ಬೈಂದೂರಿನಲ್ಲಿ 8, ಕುಂದಾಪುರದಲ್ಲಿ 9, ಕಾರ್ಕಳದಲ್ಲಿ 10, ಬ್ರಹ್ಮಾವರದಲ್ಲಿ 12 ಹಾಗೂ ಉಡುಪಿಯಲ್ಲಿ 16 ಸೇರಿದಂತೆ ಒಟ್ಟು 55 ಕೇಂದ್ರಗಳಲ್ಲಿ, ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂದರು. ಪರೀಕ್ಷಾ ಕೇಂದ್ರಗಳ ಒಳಗೆ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಸ್ಮಾರ್ಟ್ವಾಚ್, ಮೊಬೈಲ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟಾçನಿಕ್ಸ್ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಈ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾಹಿತಿ ನೀಡುವಂತೆ ಮತ್ತು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಮುನ್ನವೇ ಇವುಗಳನ್ನು ಹೊಂದಿರುವ ಬಗ್ಗೆ ಪರಿಶೀಲಿಸುವಂತೆ ತಿಳಿಸಿದ ಅವರು, ಪರೀಕ್ಷಾ ಕೇಂದ್ರಗಳಿಗೆ ಕಸ್ಟೋಡಿಯನ್‌ಗಳು, ಸ್ಥಾನಿಕ ಜಾಗೃತ ದಳ, ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನಿಯೋಜಿಸುವಂತೆ ಸೂಚನೆ ನೀಡಿದರು.
ಪರೀಕ್ಷಾ ಕೇಂದ್ರಗಳ ಒಳಗೆ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಗಳಾಗದಂತೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಗ್ರಾಮೀಣ ಪ್ರದೇಶದಿಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಆಗಮಿಸಲು ಬಸ್‌ಗಳ ಕೊರತೆಯಾಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಅವಧಿಯಲ್ಲಿ, ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳಿಗೆ ತೆರಳು ಮತ್ತು ವಾಪಾಸ್ ಮರಳಲು ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿದ್ದು, ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ಉಚಿತವಾಗಿ ಪ್ರಯಾಣ ಮಾಡಬಹುದಾಗಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮವಾಗಿ, ವಿದ್ಯಾರ್ಥಿಗಳ ಆರೋಗ್ಯದ ದೃಷ್ಠಿಯಿಂದ ಪ್ರಥಮ ಚಿಕಿತ್ಸಾ ಕಿಟ್‌ನೊಂದಿಗೆ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಸೂಚಿಸಿದರು.
ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಖಜಾನೆಯಿಂದ ಪಡೆಯುವಾಗ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಅವುಗಳನ್ನು ತೆರೆಯುವಾಗ ವೀಡಿಯೋ ಚಿತ್ರೀಕರಣ ಮಾಡುವಂತೆ ಹಾಗೂ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಸಾಗಾಟ ವಾಹನ, ಪರೀಕ್ಷಾ ಕೇಂದ್ರ ಮತ್ತು ಭದ್ರತಾ ಕೊಠಡಿಗಳಿಗೆ ಸೂಕ್ತ ಪೊಲೀಸ್ ಭದ್ರತೆ ಪಡೆಯುವಂತೆ ಹಾಗೂ ಎಲ್ಲಾ ಕೇಂದ್ರಗಳಿಗೆ ಸಕಾಲದಲ್ಲಿ ಪ್ರಶ್ನೆಪತ್ರಿಕೆಗಳು ತಲುಪುವುಂತೆ ಅಗತ್ಯವಿರುವ ವಾಹನಗಳ ವ್ಯವಸ್ಥೆ, ಮಾರ್ಗಾಧಿಕಾರಿಗಳನ್ನು ನೇಮಿಸುವಂತೆ ತಿಳಿಸಿದರು.
ಪರೀಕ್ಷೆಯ ಅವಧಿಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಗೊಂದಲಕ್ಕೀಡು ಮಾಡುವಂತಹ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಜಿಲ್ಲಾಧಿಕಾರಿಗಳು, ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ. ಪ್ರದೇಶವನ್ನು ಸೆಕ್ಷನ್ 144 ರಂತೆ ನಿಷೇಧಾಜ್ಞೆ ವಿಧಿಸುವುದರ ಜೊತೆಗೆ ಸುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಯಾವುದೇ ಗೊಂದಲಗಳಿಲ್ಲದೇ ಸುಗಮ ಮತ್ತು ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.