ರೈಲ್ವೇ ಸಿಬ್ಬಂದಿಗೆ ನಿಂದಿಸಿ, ಜೀವ ಬೆದರಿಕೆ : ಆರೋಪಿ ವಶಕ್ಕೆ

ಉಡುಪಿ (ಮಾ 27): ಮಂಗಳೂರು ಸೆಂಟ್ರಲ್ ನ ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ಜನರಲ್ ಕೋಚ್‌ನಲ್ಲಿ ಕರ್ತವ್ಯ ನಿರತ ರೈಲ್ವೇ ಪೊಲೀಸ್ ಸಿಬ್ಬಂದಿಯನ್ನು ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.


ಸಮೀರ್ ಬಿವಾಜೆ ಶಿಂದು ಬಂಧಿತ ಆರೋಪಿಯಾಗಿದ್ದಾನೆ.

ಕೊಂಕಣ ರೈಲ್ವೆಯಲ್ಲಿ ಕಾನ್‌ಸ್ಟೆಬಲ್ ಆಗಿ ಝೋನಾ ಪಿಂಟೋ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲಿನ ಜನರಲ್ ಕೋಚ್‌ನಲ್ಲಿ ಕೆಲವರು ಗಲಾಟೆ ಮಾಡುತ್ತಿರುವ ಬಗ್ಗೆ ಕರೆ ಬಂದಿತ್ತು. ಝೋನಾ ಮತ್ತು ಕಾನ್‌ಸ್ಟೆಬಲ್ ಶ್ರೀಕಾಂತ್ ಅವರೊಂದಿಗೆ ಕಂಪಾರ್ಟ್‌ಮೆಂಟ್ ಬಳಿ ಹೋದಾಗ, ಕರ್ತವ್ಯ ನಿರತ ಟಿಟಿಇ ಹಾಗೂ ಸಾರ್ವಜನಿಕರು, ಗಲಾಟೆ ಮಾಡುತ್ತಿದ್ದ ಸಮೀರ್‌ನನ್ನು ಹಿಡಿದುಕೊಂಡಿದ್ದರು.

ಸಮೀರ್ ಅವರು ಟಿಟಿಇ ನೀಡಿದ್ದ ಮೆಮೊವನ್ನು ಹರಿದು ಬಿಸಾಕಿ ಝೋನಾ ಪಿಂಟೋ ಮತ್ತು ಅವರ ಸಹೋದ್ಯೋಗಿ ಶ್ರೀಕಾಂತ್ ಅವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಮೀರ್‌ನನ್ನು ನಿಲ್ದಾಣದಲ್ಲಿರುವ ರೈಲ್ವೆ ನಿರೀಕ್ಷಕರ ಕಚೇರಿಗೆ ಕರೆದೊಯ್ದಾಗ, ಇನ್‌ಸ್ಪೆಕ್ಟರ್‌ಗೂ ಬೆದರಿಕೆ ಹಾಕಿದ್ದಾನೆ. ಕೂಡಲೇ ಆತನನ್ನು ವಶಕ್ಕೆ ಪಡೆದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Scroll to Top