ಮಲ್ಪೆ: ಮೂರ್ನಾಲ್ಕು ದಿನಗಳಿಂದ ಆಳಸಮುದ್ರದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಮೀನುಗಾರಿಕೆಗೆ ಅಡ್ಡಿಯಾಗಿದೆ.
ಭಾರೀ ಗಾಳಿ ಬೀಸುತ್ತಿರುವುದರಿಂದ ಕೆಲವು ಮೀನುಗಾರರು ಕಡಲಿಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ಗೋವಾ ಆಳಸಮುದ್ರ ದಲ್ಲಿ ಉತ್ತರದಿಂದ ಬಲವಾದ ಗಾಳಿ ಬೀಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಎರಡು- ಮೂರು ದಿನಗಳಿಂದ ಮಲ್ಪೆ ಬಂದರಿನಲ್ಲಿ ಬಹುತೇಕ ಎಲ್ಲ ಪರ್ಸಿನ್ ಬೋಟುಗಳು ಲಂಗರು ಹಾಕಿವೆ. ಟ್ರಾಲ್‌ಬೋಟ್ (370), ಸಣ್ಣ ಟ್ರಾಲ್ ಬೋಟುಗಳು ದಡದತ್ತ ಧಾವಿಸಿದ್ದು, ಮತ್ತೆ ಮೀನುಗಾರಿಕೆಗೆ ತೆರಳಿಲ್ಲ.
ಮೀನುಗಾರ ಕೃಷ್ಣ ಎಸ್. ಸುವರ್ಣ ಹೇಳುವಂತೆ, ಈ ಸಮಯದಲ್ಲಿ ಸಮುದ್ರದಲ್ಲಿ ಗಾಳಿ ತಾಸಿಗೆ ಹೆಚ್ಚೆಂದರೆ 15ರಿಂದ 20 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದರೆ ಮೀನುಗಾರಿಕೆಗೆ ತೆರಳಬಹುದು. ಆದರೆ ಈಗ ತಾಸಿಗೆ 35-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮೀನುಗಾರಿಕೆ ನಡೆಸುವುದು ಅಪಾಯಕಾರಿ. ಅಲೆಗಳ ಅಬ್ಬರವೂ ಇರುವುದರಿಂದ ಬಲೆ ಹಾಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೆಚ್ಚಿನ ಬೋಟುಗಳು ಮೀನುಗಾರಿಕೆ ನಡೆಸಲಾಗದೆ ಸಮುದ್ರ ಮಧ್ಯೆ ಲಂಗರು ಹಾಕಿವೆ. ಇನ್ನು ಕೆಲವು ಆಳಸಮುದ್ರ ಬೋಟುಗಳು ಸಮೀಪದ ಬಂದರು ಪ್ರವೇಶಿಸಿವೆ. ಅಪಾಯವನ್ನು ಅರಿತು ಗಾಳಿ ಕಡಿಮೆಯಾಗುವವರೆಗೆ ಪರ್ಸಿನ್ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ ತಿಳಿಸಿದ್ದಾರೆ.
ಪ್ರಸ್ತುತ ಮೀನಿಗೆ ಬೇಡಿಕೆ ಇದ್ದರೂ ಬೇಕಾದಷ್ಟು ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ. ಗಾಳಿ ಅಡ್ಡಿಯಾಗುವುದರಿಂದ ಮೀನುಗಾರಿಕೆಗೆ ತೆರಳಿದರೂ ಮೀನು ಸಿಗದೆ ಬರಿಗೈಯಲ್ಲಿ ವಾಪಸಾಗುವ ಪರಿಸ್ಥಿತಿ ಇದೆ ಎಂದು ಮೀನುಗಾರ ಕಾರ್ಮಿಕರು ಹೇಳಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮೀನು ಲಭ್ಯತೆ ಕಡಿಮೆಯಾಗಿದ್ದು, ದರ ಏರಿದೆ.