ಉಡುಪಿ(ಮಾ.30) : ಜಿಲ್ಲಾದ್ಯಂತ ಚುನಾವಣೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯ 1,111 ಬೂತ್‌ಗಳಿಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಿದ್ದೇವೆ. ಕ್ಷೇತ್ರವಾರು ಚುನಾವಣಾಧಿಕಾರಿಗಳ ನಿಯೋಜನೆ ಮಾಡಿದ್ದೇವೆ. 10,29,678 ಮತ ದಾರರು ಜಿಲ್ಲೆಯಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೂರ್ಮಾ ರಾವ್ ಎಂ. ತಿಳಿಸಿದರು.
ಜಿಲ್ಲೆಯಲ್ಲಿ 17,927 ಯುವ ಮತದಾರರು 11,751 ಪಿಡಬ್ಲ್ಯುಡಿ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟವರ ಪಟ್ಟಿ ಸಿದ್ಧಪಡಿಸಿದ್ದೇವೆ. ಬೈಂದೂರಿನಲ್ಲಿ 5,865, ಕುಂದಾಪುರದಲ್ಲಿ 6,209, ಉಡುಪಿಯಲ್ಲಿ 7,827, ಕಾಪುವಿನಲ್ಲಿ 5,778 ಹಾಗೂ ಕಾರ್ಕಳದಲ್ಲಿ 5,589 ಮತದಾರರು ಸೇರಿದಂತೆ ಜಿಲ್ಲೆಯಲ್ಲಿ 31,286 ಮತದಾರರು 80 ವರ್ಷ ಮೇಲ್ಪಟ್ಟವರಾಗಿದ್ದಾರೆ. ಇವರಿಗೆ ಅಂಚೆ ಮತದಾನದ ವ್ಯವಸ್ಥೆಗೂ ಅವಕಾಶವಿದೆ. ಇದು ಕಡ್ಡಾಯವಲ್ಲ. ಮತದಾನದ ದಿನದಂದು ಮತಗಟ್ಟೆಗೆ ಬಂದು ಮತದಾನ ಮಾಡುವವರಿಗೂ ಅಗತ್ಯ ವ್ಯವಸ್ಥೆ ಕಲ್ಪಿಸಲಿದ್ದೇವೆ. ದಿವ್ಯಾಂಗರಿಗೂ ಅಗತ್ಯ ಸೌಲಭ್ಯ ಕಲ್ಪಿಸಲಿದ್ದೇವೆ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಶೇಷ ನಿಗಾ
ಕಾರ್ಯಕ್ರಮ, ಸಭೆ ಸಮಾರಂಭಗಳ ಮೇಲೆ ವಿಶೇಷ ನಿಗಾ ವಹಿಸಲು 15 ವೀಡಿಯೋ ತಂಡ, 45 ಫ್ಲೈಯಿಂಗ್ ಸ್ವಾéಡ್, 17 ಸರ್ವೇಲೆನ್ಸ್ ಟೀಮ್, 92 ಸೆಕ್ಟರ್ ಆಫೀಸರ್ ಟೀಮ್, 5 ವೀಡಿಯೋ ವ್ಯೂವಿಂಗ್ ಟೀಮ್, 5 ಎಂಸಿಸಿ ನೋಡಲ್ ಆಫೀಸರ್ ಹಾಗೂ 5 ಖರ್ಚುವೆಚ್ಚ ಪರಿಶೀಲನ ತಂಡ ರಚನೆ ಮಾಡಲಾಗಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೇ ಅಕ್ಷಯ್ ಮಚ್ಚೀಂದ್ರ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಉಪಸ್ಥಿತರಿದ್ದರು.
ಬ್ಯಾನರ್, ಕಟೌಟ್‌ಗೆ ಅನುಮತಿ ಇಲ್ಲ
ಚುನಾವಣೆ ನೀತಿ ಸಂಹಿತೆ ಜಾರಿಗೊಂಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಪಕ್ಷಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಚಾರ, ಶುಭ ಕೋರುವ ಹಾಗೂ ಕಾರ್ಯಕ್ರಮಗಳ ಬಗೆಗಿನ ಬ್ಯಾನರ್, ಬಂಟಿಂಗ್ಸ್, ಕಟೌಟ್ ಅಳವಡಿಸಲು, ಭಿತ್ತಿಪತ್ರ ಹಂಚಲು, ಭಿತ್ತಿ ಪತ್ರಗಳನ್ನು ಗೋಡೆಗೆ ಅಂಟಿಸಲು, ಗೋಡೆ ಬರಹ ಬರೆಯಲು ಸ್ಥಳಿಯಾಡಳಿತದಿಂದ ಅನುಮತಿ ನೀಡದಿರಲು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಆದೇಶಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೇಲೂ ಕಣ್ಣು
ಸಾರ್ವಜನಿಕರಿಗೆ ನಿತ್ಯದ ಜೀವನಕ್ಕೆ ಯಾವುದೇ ಸಮಸ್ಯೆಯಾಗದಂತೆ ನೀತಿ ಸಂಹಿತೆ ಜಾರಿ ಮಾಡಲಾಗುವುದು. ಸಾಮಾಜಿಕ ಜಾಲತಾಣದ ಮೇಲೂ ವಿಶೇಷ ಕಣ್ಣಿಟ್ಟಿದ್ದೇವೆ. ವಾಟ್ಸ್‌ಆ್ಯಪ್, ಫೇಸ್‌ಬುಕ್, ಯುಟ್ಯೂಬ್ ಚಾನಲ್ ಪ್ರಚಾರದ ಮೇಲೂ ಗಮನ ಹರಿಸಲಿದ್ದೇವೆ ಎಂದರು.
ಖಾಸಗಿ ಸಭೆ ಸಮಾರಂಭ ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿರ್ಬಂಧ ಇಲ್ಲ. ಆದರೆ ಅಭ್ಯರ್ಥಿಗಳು ಖಾಸಗಿ, ಸಾರ್ವಜನಿಕ ಸಭೆ ಸಮಾರಂಭಗಳನ್ನು ತಮ್ಮ ಮತಪ್ರಚಾರಕ್ಕೆ ಬಳಸಿಕೊಂಡಾಗ ಅದರ ವೆಚ್ಚ ಅಭ್ಯರ್ಥಿ ವ್ಯಾಪ್ತಿಗೆ ಸೇರುತ್ತದೆ. ಮದುವೆ, ವೈಯಕ್ತಿಕ ಸಮಾರಂಭಗಳನ್ನು ಮನೆಗಳಲ್ಲಿ ಮಾಡಿಕೊಳ್ಳಲು ಯಾವುದೇ ಅಡ್ಡಿಯಿಲ್ಲ. ಸಾರ್ವಜನಿಕ ಸಮಾರಂಭಕ್ಕೆ ಅನುಮತಿ ಪಡೆಯಬೇಕಾಗುತ್ತದೆ ಎಂದು ಜಿ.ಪಂ. ಸಿಇಒ ಪ್ರಸನ್ನ ಎಚ್. ತಿಳಿಸಿದರು.
ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಧ್ವನಿವರ್ಧಕ ಬಳಸುವಂತಿಲ್ಲ. ಯಕ್ಷಗಾನ, ಕೋಲ, ನೇಮೋತ್ಸವ ಇತ್ಯಾದಿಗಳ ಸಂಬಂಧ ಪರಿಶೀಲಿಸಿ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾದ್ಯಂತ ಚುನಾವಣೆಗೆ ಸಕಲ ಸಿದ್ಧತೆ..- ಜಿಲ್ಲಾಧಿಕಾರಿ
