ಕೇರಳದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೆ : ಗಡಿ ಭಾಗದ ಪೆಟ್ರೋಲ್ ಬಂಕ್ ಗಳಿಗೆ ಮುಗಿಬಿದ್ದ ಕೇರಳಿಗರು

ಕೇರಳ (ಎ.1) : ಸರಕಾರವು ಬಜೆಟ್ ಪ್ರಸ್ತಾವನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಶುಕ್ರವಾರದಿಂದ ರಾಜ್ಯದಲ್ಲಿ ಜೀವನ ವೆಚ್ಚ ಗಗನಕ್ಕೇರಿದೆ.

ಹೆಚ್ಚುವರಿ ಹಣವನ್ನು ಸಂಗ್ರಹಿಸುವ ಕ್ರಮವಾಗಿ, ಆಡಳಿತಾರೂಢ ಎಡ ಸರ್ಕಾರವು ಪೆಟ್ರೋಲ್, ಡೀಸೆಲ್ ಇಂಧನ ಮತ್ತು ಮದ್ಯದ ಮಾರಾಟದ ಮೇಲೆ ಸಾಮಾಜಿಕ ಭದ್ರತಾ ಸೆಸ್ ಅನ್ನು ವಿಧಿಸಿದ್ದು, ಕೇರಳದಲ್ಲಿ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಗಗನಕ್ಕೇರಿದೆ.

ಬಜೆಟ್ ನಲ್ಲಿ ಘೋಷಿಸಿದಂತೆ ಕೇರಳ ಸರಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಮತ್ತೆ ಎರಡು ರೂಪಾಯಿ ಸೆಸ್ ಹೇರಿದೆ. ಇದರಿಂದಾಗಿ ಕೇರಳದಲ್ಲೀಗ ಪೆಟ್ರೋಲ್ ಬೆಲೆ ಲೀಟರ್ ಗೆ 108.48ರೂಪಾಯಿ ಆಗಿದ್ದು, ಪಕ್ಕದ ಮಂಗಳೂರಿನಲ್ಲಿ ಪೆಟ್ರೋಲ್ ಬೆಲೆ 101.48ರೂಪಾಯಿಗೆ ಸಿಗುತ್ತಿದೆ. ಕೇರಳಕ್ಕಿಂತ ಏಳು ರೂಪಾಯಿ ಅಗ್ಗ ದರದಲ್ಲಿ ರಾಜ್ಯದಲ್ಲಿ ಪೆಟ್ರೋಲ್ ದೊರೆಯುತ್ತಿದೆ. ಪೆಟ್ರೋಲ್ ಅಲ್ಲದೆ ಡಿಸೇಲ್ ಕೂಡ ಕೇರಳಕ್ಕಿಂತ ಹತ್ತು ರೂಪಾಯಿ ಅಗ್ಗದಲ್ಲಿ‌ ಸಿಗುತ್ತಿದೆ.

ತೀವ್ರ ಆರ್ಥಿಕ ಮುಗ್ಗಟ್ಟು ಹಿನ್ನಲೆಯಲ್ಲಿ ಪೆಟ್ರೋಲ್ ಉತ್ಪನ್ನಗಳ ಮೇಲೆ ಕೇರಳ ಸರಕಾರ ಸೆಸ್ ದರ ವಿಧಿಸಿದೆ. ಇದರಿಂದಾಗಿ ಇದೀಗ ಕೇರಳದಲ್ಲಿ ಪೆಟ್ರೋಲ್ ಬೆಲೆ-108.49 ರೂಪಾಯಿ, ಡಿಸೇಲ್ ದರ 97.40 ರೂಪಾಯಿ ಆಗಿದೆ. ಕೇರಳದಲ್ಲಿ ತೈಲ ದರ ಏರಿಕೆ ಹಿನ್ನಲೆಯಲ್ಲಿ ಗಡಿಭಾಗದಲ್ಲಿ ಪೆಟ್ರೋಲ್ ಬಂಕ್ ಗಳಿಗೆ ಸುಗ್ಗಿ ಕಾಲ ಬಂದಿದ್ದು, ಕೇರಳ ಸರ್ಕಾರದ ವಾಹನಗಳು ಸೇರಿದಂತೆ ಕೇರಳ ನೋಂದಾಯಿತ ವಾಹನಗಳು ಗಡಿಭಾಗದಲ್ಲಿರುವ ಪೆಟ್ರೋಲ್ ಬಂಕ್ ಗಳಲ್ಲಿ ಕ್ಯೂ ನಿಲ್ಲುವ ಹಂತಕ್ಕೆ ಬಂದಿದೆ.

You cannot copy content from Baravanige News

Scroll to Top