ಪ್ರೀತಿಸೋ ಕಾಲೇಜ್ ಹುಡುಗ, ಹುಡುಗಿಯರು ಐ ಲವ್ ಯೂ ಅನ್ನೋಕೆ, ಜೊತೆ, ಜೊತೆಯಾಗಿ ಸುತ್ತಾಡೋಕೆ ಕಾಲೇಜಿಗೆ ಚಕ್ಕರ್ ಹಾಕ್ತಾರೆ. ಆದರೆ ಚೀನಾ ದೇಶದ ಕಾಲೇಜುಗಳು ಪ್ರೀತಿ ಮಾಡೋಕೆ ಒಂದು ವಾರ ರಜೆಯನ್ನೇ ಪ್ರಕಟಿಸಿದೆ.
ಪ್ರೀತ್ಸೆ ಅಂತಾ ಪ್ರಾಣ ತಿನ್ನೋ ಚೀನಾ ಕಾಲೇಜು ಹುಡುಗರಿಗೆ ಇದು ನಿಜಕ್ಕೂ ಗುಡ್ನ್ಯೂಸ್..
ಸದ್ಯ ಚೀನಾ ದೇಶದ 9 ಕಾಲೇಜುಗಳು ಇಂತಹದೊಂದು ಬಂಪರ್ ಆಫರ್ ಕೊಟ್ಟಿವೆ. ಏಪ್ರಿಲ್ 1 ರಿಂದ 7ರವರೆಗೂ ಈ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ವಾರ ‘ಫಾಲ್ ಇನ್ ಲವ್’ ಲೀವ್ ಕೊಟ್ಟಿದೆ. ಅಬ್ಬಬ್ಬಾ.. ಎಂಥಾ ಅದೃಷ್ಟ ಅಂದುಕೊಂಡ್ರಾ. ಚೀನಾದ ಕಾಲೇಜುಗಳು ಯಾಕಿಂಥಾ ನಿರ್ಧಾರಕ್ಕೆ ಬಂದಿದೆ.
ಒಂದು ವಾರದ ರಜೆಯಲ್ಲಿ ಯುವಪ್ರೇಮಿಗಳು ಏನೆಲ್ಲಾ ಮಾಡ್ತಾರೆ ಗೊತ್ತಾ.. ಅದೇ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.
ಚೀನಾದಲ್ಲಿ ಜನಸಂಖ್ಯೆಯ ಏರಿಕೆ ಪ್ರಮಾಣ ಬಹಳಷ್ಟು ಕುಸಿದಿದೆ. ಇದು ಚೀನಾ ಅಧ್ಯಕ್ಷ ಜಿನ್ಪಿಂಗ್ ಸರ್ಕಾರಕ್ಕೂ ತಲೆನೋವಾಗಿದೆ. ಸರ್ಕಾರದ ಉನ್ನತ ಸಲಹೆಗಾರರು ಜನಸಂಖ್ಯೆಯ ಪ್ರಮಾಣ ಹೆಚ್ಚಿಸಲು ಹಲವು ಶಿಫಾರಸುಗಳನ್ನು ಮಾಡಿದೆ. ಇದರ ಮಧ್ಯೆ 9 ಕಾಲೇಜು ಶಿಕ್ಷಣ ಸಂಸ್ಥೆಗಳು ಏಪ್ರಿಲ್ನಲ್ಲಿ ತನ್ನ ವಿದ್ಯಾರ್ಥಿಗಳಿಗೆ ಒಂದು ವಾರ ‘ಫಾಲ್ ಇನ್ ಲವ್’ ರಜೆ ನೀಡುವ ಐಡಿಯಾ ಮಾಡಿವೆ.
ಚೀನಾ ಮಾಧ್ಯಮಗಳ ವರದಿ ಪ್ರಕಾರ 9 ಕಾಲೇಜು ಶಿಕ್ಷಣ ಸಂಸ್ಥೆಗಳು ಮಾರ್ಚ್ 21ರಂದೇ ರಜೆ ಘೋಷಿಸಿದವು. ಈ ‘ಫಾಲ್ ಇನ್ ಲವ್’ ಲೀವ್ನಲ್ಲಿ ಪ್ರೀತಿ ಅಂದರೆ ಹೇಗಿರುತ್ತೆ. ಪ್ರೀತಿಯ ಅನುಭವ ಹೇಗಿರುತ್ತೆ. ರಜೆ ಸಿಕ್ಕಾಗ ಪ್ರೀತಿಯನ್ನು ಎಷ್ಟು ಆನಂದಿಸಬಹುದು ಅನ್ನೋದನ್ನ ತಿಳಿದುಕೊಳ್ಳಲು ಅವಕಾಶ ನೀಡಿದೆ.
ಚೀನಾದ ಕಾಲೇಜು ವಿದ್ಯಾರ್ಥಿಗಳಿಗೆ ಪ್ರೀತಿಯಲ್ಲಿ ಬೀಳಲು ಹಾಗೂ ತಮಗೆ ಇಷ್ಟವಾದವರನ್ನ ಪ್ರೀತಿಯಲ್ಲಿ ಬೀಳಿಸಿಕೊಳ್ಳಲು ಇಂದೊಂದು ಅದ್ಭುತ ಅವಕಾಶ ಎನ್ನಲಾಗಿದೆ.
‘ಫಾಲ್ ಇನ್ ಲವ್’ ರಜೆಯ ಜೊತೆಗೆ ಕಾಲೇಜು ಹೋಮ್ ವರ್ಕ್ ಅನ್ನು ಕೂಡ ಕೊಟ್ಟಿದೆ. ವಿದ್ಯಾರ್ಥಿಗಳು ಡೈರಿ ಬರೆಯಬೇಕು. ವೈಯಕ್ತಿಕ ವಿಚಾರಗಳನ್ನು ಟ್ರ್ಯಾಕ್ ಮಾಡಬೇಕು. ಜೊತೆಗೆ ಪ್ರವಾಸಕ್ಕೆ ಹೋದರೆ ವಿಡಿಯೋ ಚಿತ್ರೀಕರಣ ಮಾಡಬೇಕು ಎಂದಿದೆ. ಇದರಿಂದ ಪ್ರೀಮಿಗಳ ಸಂಖ್ಯೆ ಹೆಚ್ಚಾಗಿ ಜನಸಂಖ್ಯೆಯ ಹೆಚ್ಚಳಕ್ಕೂ ಸಹಕಾರಿಯಾಗುತ್ತದೆ ಅನ್ನೋದು ಕಾಲೇಜಿನ ನಂಬಿಕೆಯಾಗಿದೆ.
1980 ರಿಂದ 2015ರವರೆಗೂ ಚೀನಾದಲ್ಲಿ ದಂಪತಿ ಒಂದೇ ಒಂದು ಮಗುವಿಗೆ ಜನ್ಮ ನೀಡುವ ಕಾನೂನು ಜಾರಿಯಲ್ಲಿತ್ತು. 2021ರಲ್ಲಿ ಒಂದು ಮಗುವಿನಿಂದ ಮೂರು ಮಕ್ಕಳಿಗೆ ಅವಕಾಶ ಕಲ್ಪಿಸಲಾಯಿತು. ಚೈಲ್ಡ್ ಕೇರ್ ಸೆಂಟರ್ಗಳ ಅಭಾವ, ವಿದ್ಯಾಭ್ಯಾಸದ ವೆಚ್ಚ, ಕಡಿಮೆ ಆದಾಯ, ಆರ್ಥಿಕ ಭದ್ರತೆ, ಲಿಂಗಾನುಪಾತದಿಂದ ಜನಸಂಖ್ಯಾ ಪ್ರಮಾಣ ಹೆಚ್ಚಾಗಲೇ ಇಲ್ಲ. ಇದರ ಜೊತೆಗೆ 2019ರ ಕೊರೊನಾ ಸಂದರ್ಭದಲ್ಲಿ ಚೀನಾ ದೇಶದಲ್ಲಿ ಜನನ ಪ್ರಮಾಣ ಸಂಪೂರ್ಣ ಕುಸಿದಿದೆ. ಹೀಗಾಗಿ ಈಗ ಚೀನಾ ದೇಶದಲ್ಲಿ ಪ್ರೀತಿ ಮಾಡುವ ಯುವಕರಿಗೆ ಉತ್ತೇಜನ ನೀಡಲು ಹಲವು ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ..