ಕೋಯಿಕ್ಕೋಡ್ (ಎ.3) : ರೈಲಿನಲ್ಲಿ ಉಂಟಾದ ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿ ಎಂಟು ಮಂದಿಯನ್ನು ಗಾಯಗೊಳಿಸಿದ ಘಟನೆ ನಡೆದಿದ್ದು, ಈ ಘಟನೆಯಲ್ಲಿ ಮೂವರು ಸಾವನಪ್ಪಿದ್ದಾರೆ.
ಪ್ರಯಾಣಿಕರು ತುರ್ತು ಸರಪಳಿಯನ್ನು ಎಳೆದ ನಂತರ ಆಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ನಿಧಾನವಾದಾಗ, ಆರೋಪಿ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.
ಮೂಲಗಳ ಪ್ರಕಾರ, ರೈಲು ಕೋಯಿಕ್ಕೋಡ್ ನಗರವನ್ನು ದಾಟಿ ಕೊರಪುಳ ರೈಲ್ವೆ ಸೇತುವೆಯನ್ನು ತಲುಪಿದಾಗ ಈ ಘಟನೆ ಸಂಭವಿಸಿದೆ. ರೈಲ್ವೆ ರಕ್ಷಣಾ ಪಡೆಗೆ (ಆರ್‌ಪಿಎಫ್) ಮಾಹಿತಿ ನೀಡಿದ ಪ್ರಯಾಣಿಕರು ಬೆಂಕಿಯನ್ನು ನಂದಿಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಬೆಂಕಿ ಹಚ್ಚಿದ ವ್ಯಕ್ತಿ ಘಟನೆ ಬಳಿಕ ಪರಾರಿಯಾಗಿದ್ದಾನೆ.
ಸುಟ್ಟಗಾಯಗಳಾಗಿರುವ ಮೂವರನ್ನು ಆರ್‌ಪಿಎಫ್ ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ಅಗತ್ಯ ತಪಾಸಣೆಯ ನಂತರ ರೈಲು ತನ್ನ ಪ್ರಯಾಣವನ್ನು ಮುಂದುವರೆಸಿದೆ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಇಬ್ಬರ ನಡುವೆ ಶಂಕಿತ ವಾಗ್ವಾದದ ನಂತರ ಘಟನೆ ನಡೆದಿದೆ. ಕೋಯಿಕ್ಕೋಡ್ ನಗರ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ ಈ ಬಗ್ಗೆ ತನಿಖೆ ಆರಂಭಿಸಿದೆ.