ಮೀನು ಸೇವಿಸಿ ಮಹಿಳೆ ಸಾವು ; ಕೋಮಾದಲ್ಲಿ ಪತಿ..!!

‘ಪಫರ್‌’ ಹೆಸರಿನ ಡೆಡ್ಲಿ ಮೀನನ್ನು ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಆಕೆಯ ಪತಿ ಕೋಮಾ ಸ್ಥಿತಿ ತಲುಪಿರುವ ಬೆಚ್ಚಿಬೀಳಿಸುವ ಘಟನೆ ಮಲೇಷ್ಯಾದಲ್ಲಿ ನಡೆದಿದೆ.

ಮಲೇಷ್ಯಾದ ಜೊಹೋರ್‌ ನಿವಾಸಿ ಲಿಮ್ ಸಿವ್ ಗುವಾನ್ (83) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.

ಆಕೆಯ ಪತಿ ಕೋಮಾ ಸ್ಥಿತಿಯಲ್ಲಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಸ್ಥಳೀಯ ಅಂಗಡಿಯಲ್ಲಿ ಪಫರ್‌ ಎಂಬ ಮೀನನ್ನು ಖರೀದಿಸಿ ಅಡುಗೆ ಮಾಡಿ ತಿಂದಿದ್ದರು. ನನ್ನ ತಂದೆ-ತಾಯಿ ಹಲವು ವರ್ಷಗಳಿಂದ ಅದೇ ಮೀನು ವ್ಯಾಪಾರಿಯಿಂದ ಮೀನು ಖರೀದಿಸುತ್ತಿದ್ದಾರೆ. ಆದ್ದರಿಂದ ನನ್ನ ತಂದೆ ಆ ಮೀನಿನ ಬಗ್ಗೆ ಅಷ್ಟೇನು ಯೋಚಿಸಲಿಲ್ಲ ಎಂದು ಲಿಮ್‌ ದಂಪತಿ ಪುತ್ರಿ ಪ್ರತಿಕ್ರಿಯೆ ನೀಡಿದ್ದಾರೆ.

ಜೋಹೋರ್‌ನ ಆರೋಗ್ಯ ಮತ್ತು ಏಕತಾ ಸಮಿತಿಯ ಅಧ್ಯಕ್ಷ ಲಿಂಗ್ ಟಿಯಾನ್ ಸೂನ್ ಪ್ರತಿಕ್ರಿಯಿಸಿ, ದಂಪತಿ ಮೀನು ಬಳಸಿ ಅಡುಗೆ ಮಾಡಿ ಸೇವಿಸಿದ್ದರು. ಈ ವೇಳೆ ಮಹಿಳೆಯು ನಡುಕ ಹಾಗೂ ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ಆಕೆಯ ಪತಿ ಕೂಡ ಒಂದು ಗಂಟೆಯ ನಂತರ ಇದೇ ರೀತಿಯ ರೋಗಲಕ್ಷಣಗಳಿಂದ ಬಳಲಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಷ್ಟರಲ್ಲಿ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಆಹಾರ ವಿಷಪೂರಿತವಾಗಿದ್ದೇ ಮಹಿಳೆ ಸಾವಿಗೆ ಕಾರಣ. ಇದರ ಪರಿಣಾಮವಾಗಿ ಹೃದಯ ಸಂಬಂಧಿ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಹೀಗಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ವರದಿ ಬಂದಿಲ್ಲ. ಆ ದಿನಾಂಕದಂದು ಮಾರಾಟವಾದ ಎಲ್ಲಾ ಜಾತಿಯ ಮೀನುಗಳನ್ನು ಜಿಲ್ಲಾ ಆರೋಗ್ಯ ಕಚೇರಿ (ಪಿಡಿಕೆ) ವಿಶ್ಲೇಷಣೆಗಾಗಿ ತೆಗೆದುಕೊಳ್ಳಲಾಗಿದೆ. ಆಹಾರದ ಆಯ್ಕೆಯಲ್ಲಿ ಅನುಮಾನ ಬಂದರೆ ಜಾಗರೂಕರಾಗಿರಿ ಎಂದು ಜನರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಜಪಾನಿನ ಜನಪ್ರಿಯ ಆಹಾರವಾದ ಪಫರ್ ಮೀನಿನಲ್ಲಿ ಮಾರಣಾಂತಿಕ ವಿಷಕಾರಿ ಟೆಟ್ರೋಡೋಟಾಕ್ಸಿನ್ ಮತ್ತು ಸ್ಯಾಕ್ಸಿಟಾಕ್ಸಿನ್ ಅಂಶ ಇದೆ. ಈ ಅಂಶವನ್ನು ಅಡುಗೆ ಅಥವಾ ಘನೀಕರಿಸುವ ಮೂಲಕ ನಾಶಪಡಿಸಲಾಗುವುದಿಲ್ಲ. ಮೀನಿನಿಂದ ಈ ವಿಷವನ್ನು ಹೇಗೆ ತೆಗೆದುಹಾಕಬೇಕು ಎಂಬ ಬಗ್ಗೆ ತರಬೇತಿ ಪಡೆದಿರುವ ಅರ್ಹ ಬಾಣಸಿಗರಿಗೆ ಮಾತ್ರ ಮೀನು ಆಹಾರ ತಯಾರಿಸಲು ಅನುಮತಿ ನೀಡಲಾಗಿದೆ ಎಂದು ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಮಾಹಿತಿ ನೀಡಿದೆ.

Scroll to Top