ಉಡುಪಿ (ಎ.3) : ವಾತಾವರಣ ಉಷ್ಣಾಂಶ ಏರಿಳಿತ ವಾಗುತ್ತಿದ್ದು, ರೋಗ ರುಜಿನಗಳಿಗೆ ಕಾರಣವಾಗುತ್ತಿದೆ. ಹವಾಮಾನ ವೈಪರೀತ್ಯದ ಪರಿಣಾಮ ಶೀತ, ಕೆಮ್ಮು ಸಹಿತ ವೈರಲ್ ಜ್ವರ ಪ್ರಕರಣ ಹೆಚ್ಚುವ ಸಾಧ್ಯತೆ ಇದೆ.
ಜಿಲ್ಲೆಯಾದ್ಯಂತ ಬೆಳಗ್ಗೆ ಮೋಡ, ಪೂರ್ವಾಹ್ನ 11 ಗಂಟೆಯ ಬಳಿಕ ಬಿಸಿಲಿನ ತಾಪ ಏರುತ್ತದೆ. ಸಂಜೆಯ ವರೆಗೂ ಇದೇ ರೀತಿ ಇದ್ದು, ರಾತ್ರಿ ಸೆಕೆ, ಮುಂಜಾನೆ 4 ಗಂಟೆ ಬಳಿಕ ಚಳಿಯ ವಾತಾವರಣ ಇರುತ್ತದೆ. ಕಳೆದ ತಿಂಗಳು 37ರಿಂದ 39 ಡಿ.ಸೆ.ವರೆಗೂ ಏರಿಕೆಯಾದ ತಾಪಮಾನ ಸದ್ಯ ತುಸು ಇಳಿದಿದೆ. ಇಂಥ ಸಂದರ್ಭ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕಾಗಿದೆ.
ದೇಹದಲ್ಲಿ ನೀರಿನ ಅಂಶ ಕಡಿಮೆ ಯಾಗಿ, ರೋಗ ನಿರೋ ಧಕ ಶಕ್ತಿಯೂ ಕುಂದುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬಾಯಾರಿಕೆ ಆಗದಿದ್ದರೂ ನೀರು ಕುಡಿಯಬೇಕಾಗಿದೆ ಎನ್ನುತ್ತಾರೆ ವೈದ್ಯರು.
ಆರೋಗ್ಯ ಇಲಾಖೆಯಿಂದ ಜಾಗೃತಿ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ದ.ಕ. ಹಾಗೂ ಉಡುಪಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಅದರಂತೆ ಗರಿಷ್ಠ ಉಷ್ಣಾಂಶ ಏರಿಕೆಯಿಂದಾಗಿ ಏನೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ವೈದ್ಯರಿಗೆ ಸೂಚಿಸಲಾಗಿದೆ. ವೈದ್ಯರು/ತಂಡ ಕ್ಷೇತ್ರ ವೀಕ್ಷಣೆಗೆ ತೆರಳುವ ವೇಳೆ ಮತ್ತು ಸಾರ್ವಜನಿಕರು ಆರೋಗ್ಯ ಕೇಂದ್ರಕ್ಕೆ ಆಗಮಿಸುವಾಗ ಈ ಅರಿವು ಮೂಡಿಸಲಾಗುತ್ತದೆ. ಆರೋಗ್ಯ ಇಲಾಖೆಯಿಂದ ಫೀವರ್ ಸರ್ವೇ ನಡೆಯುತ್ತಿದೆ. ಆಶಾ ಕಾರ್ಯಕರ್ತೆಯರು, ಮಲೇರಿಯಾ ನಿಯಂತ್ರಣ ಕಾರ್ಯಕರ್ತರು, ಆರೋಗ್ಯ ಸುರಕ್ಷಾ ಅಧಿಕಾರಿಗಳು ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಎಂಪಿಡಬ್ಲ್ಯೂ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಜ್ವರದ ಲಕ್ಷಣ ಇದ್ದರೆ ಅವರನ್ನು ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸುತ್ತಿದ್ದಾರೆ.