ಬೆಂಗಳೂರು (ಎ.4) : ರಾಜ್ಯ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ ಮಾಡಿವೆ. ಬಿಜೆಪಿ ಕೂಡ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಸರತ್ತು ನಡೆಸಿದೆ. ಬಿಜೆಪಿ ಇನ್ನೂ ಯಾವುದೇ ಪಟ್ಟಿ ಬಿಡುಗಡೆಗೊಳಿಸಿಲ್ಲ. ಆದರೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯೊಂದು ವೈರಲ್ ಆಗಿದೆ.
ಬಿಜೆಪಿಯ ಲೆಟರ್ ಪ್ಯಾಡ್ ತರ ಇರುವ ಈ ಪಟ್ಟಿಯಲ್ಲಿ 100 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಾಗಿದೆ. ಬಿಜೆಪಿ ಸೀಲ್ ಕೂಡ ಇದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಸಹಿ ಕೂಡ ಇದೆ. ಆದರೆ, ಒರಿಜಿನಲ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರ ಸಹಿ ಇರುತ್ತದೆ. ಆದರೆ ಈ ಪಟ್ಟಿಯಲ್ಲಿ ಜೆಪಿ ನಡ್ಡಾ ಅವರ ಸಹಿ ಇಲ್ಲ. ಈ ಪಟ್ಟಿಯಲ್ಲಿ ಹಲವು ಕ್ಷೇತ್ರಗಳಿಗೆ ಅಚ್ಚರಿಯ ಅಭ್ಯರ್ಥಿಗಳನ್ನು ಘೋಷಿಸಿದ್ದು, ನೋಡಿದ ತಕ್ಷಣ ನಕಲಿ ಎಂಬುದು ಗೊತ್ತಾಗುತ್ತದೆ.
ಇದರಲ್ಲಿ ಕಾರ್ಕಳದಲ್ಲಿ ಇಂಧನ ಸಚಿವ ಸುನೀಲ್ ಕುಮಾರ್ ಬದಲಿಗೆ ಪ್ರಮೋದ್ ಮುತಾಲಿಕ್ ಹೆಸರಿದೆ. ಅಲ್ಲದೆ ಅದಲ್ಲದೇ ಸಂಸದರಾಗಿ, ಕೇಂದ್ರ ಸಚಿವರಾಗಿರುವ ಹೆಸರುಗಳು ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಮಂಗಳೂರು ದಕ್ಷಿಣ ನೀಡಲಾಗಿದ್ದರೆ, ಇತ್ತೀಚೆಗಷ್ಟೇ ಬಿಜೆಪಿಗೆ ಬೆಂಬಲ ಘೋಷಿಸಿರುವ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಮಂಡ್ಯ ಟಿಕೆಟ್ ಅನ್ನು ಈ ಪಟ್ಟಿಯಲ್ಲಿ ನೀಡಲಾಗಿದೆ. ಈ ಪಟ್ಟಿಯನ್ನು ನಕಲಿ ಎಂದಿರುವ ಬಿಜೆಪಿ ಕಾಂಗ್ರೇಸ್ ವಿರುದ್ದ ಹರಿಹಾಯ್ದಿದೆ.