ಬೆಂಗಳೂರು: ಕನಪುರದ ಸಾತನೂರು ಬಳಿ ಗೋ ಸಾಗಾಟ ವೇಳೆ ವ್ಯಕ್ತಿಯೋರ್ವ ಅನುಮಾನಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಬಂಧನವಾಗಿದೆ.
ಕಳೆದ ಐದು ದಿನಗಳಿಂದ ತಲೆಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಸೇರಿದಂತೆ ಒಟ್ಟು ಐವರರನ್ನು ಸಾತನೂರು ಠಾಣೆ ಪೊಲೀಸರು ಇಂದು(ಏಪ್ರಿಲ್ 05) ರಾಜಸ್ಥಾನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾರ್ಚ್ 31 ರಂದು ಪುನೀತ್ ಕೆರೆಹಳ್ಳಿ ಹಾಗೂ ತಂಡ ಗೋವುಗಳನ್ನು ಸಾಗಿಸುತ್ತದ್ದ ಕ್ಯಾಂಟರ್ ತಡೆದು ಜಾನುವಾರು ರಕ್ಷಣೆ ಮಾಡಿದ್ದರು. ಆದ್ರೆ, ಮಾರನೇ ದಿನ ಅಂದ್ರೆ ಏಪ್ರಿಲ್ 1ರಂದು ಕ್ಯಾಂಟರ್ನಲ್ಲಿದ್ದ ಇದ್ರೀಷ್ ಪಾಷ(35) ಶವವಾಗಿ ಪತ್ತೆಯಾಗಿದ್ದರು.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಗ್ರಾಮದ ಬಳಿ ಮಂಡ್ಯದ ಗುತ್ತಲು ನಿವಾಸಿ ಇದ್ರೀಷ್ ಪಾಷ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಮೃತನ ಸಹೋದರ ಸಾತನೂರು ಠಾಣೆಗೆ ಪುನೀತ್ ಕೆರೆಹಳ್ಳಿ ಸೇರಿದಂತೆ ಇತರರರ ವಿರುದ್ಧ ದೂರು ನೀಡಿದ್ದರು.
ಐಪಿಸಿ ಸೆಕ್ಷನ್ 341, 504, 506, 324, 302, 34 ಅಡಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆಯೇ ಕಳೆದ ಐದು ದಿನದಿಂದ ಪುನೀತ್ ಅಂಡ್ ಟೀಂ ತಲೆ ಮರೆಸಿಕೊಂಡಿತ್ತು. ಇನ್ನು ಆರೋಪಿಗಳನ್ನು ಬಂಧಿಸಲು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ನಾಲ್ಕು ತಂಡಗಳನ್ನು ರಚಿಸಿದ್ದರು. ಇದೀಗ ಅಂತಿಮವಾಗಿ ಆರೋಪಿಗಳು ರಾಜಸ್ಥಾನದಲ್ಲಿ ಸಿಕ್ಕಿಬಿದ್ದಿದ್ದಾರೆ.