ಶಿರ್ವ, ಎ. 3: ಉಡುಪಿ ಜಿಲ್ಲೆ ಶಿರ್ವ ಗ್ರಾಮದ ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಾನಕ್ಕೆ ಸಂಬಂಧ ಪಟ್ಟ ಸುಮಾರು 550 ವರ್ಷಗಳ ಇತಿಹಾಸವಿರುವ ನ್ಯಾರ್ಮಶ್ರೀಧರ್ಮ ಜಾರಂದಾಯ ದೈವಸ್ಥಾನದಲ್ಲಿ ಸಂಪ್ರದಾಯದಂತೆ ಸುಗ್ಗಿ ಹುಣ್ಣಿಮೆ ಎ. 6ರಂದು ಶಿರ್ವ ನಡಿಬೆಟ್ಟಿನ ನೇಮ, ಎ. 7 ರಂದು ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಊರಿನ ನೇಮ ನಡೆಯಲಿದೆ.
ಧಾರ್ಮಿಕ ಹಿನ್ನೆಲೆ
ಅತಿ ಪುರಾತನ ಸಾನ್ನಿಧ್ಯವಿರುವ ಶ್ರೀ ಧರ್ಮ ಜಾರಂದಾಯ ದೈವವು ದಕ್ಷಿಣದಿಂದ ಬಂದು ಶಿರ್ವ ಅಟ್ಟಿಂಜೆ ಗೋಳಿ, ಜತೊಟ್ಟು ಬರ್ಕೆ, ಶಿರ್ವ ನಡಿಬೆಟ್ಟು ಚಾವಡಿಗೆ ಚಾವಡಿಯ ರಾಜನ್ ಬಂದು ಜುಮಾದಿಯ ಆಶಯದಂತೆ ಶ್ರೀ ವಿಷ್ಣುಮೂರ್ತಿ ದೇವರ ಅನುಗ್ರಹ ದಿಂದ ನಾರಿಕೇಳ ಫಲದ ಮೂಲಕ ನಾಗಸಾನಿಧ್ಯವಿರುವನ್ಯಾರ್ಥ ಉರಿ ಉಂಡಾಲ ಪಾದೆಯಲ್ಲಿ ನೆಲೆಗೊಂಡು ಗ್ರಾಮದ ರಕ್ಷಣೆ ಮಾಡುತ್ತಿದೆ.
ಊರಿನ ನೇಮದಂದು ಶ್ರೀಧರ್ಮ ಜಾರಂದಾಯ ದೈವವು ಬಾಕ್ಯಾರು ಗದ್ದೆಯಲ್ಲಿ ಕುದುರೆಯೇರಿ ಶ್ರೀ ವಿಷ್ಣುಮೂರ್ತಿ ದೇವರ ಭೇಟಿ ಮಾಡುವ ದೃಶ್ಯ ರಮಣೀಯವಾಗಿದೆ. ಅಲ್ಲಿಂದ ಹಿಂದಿರುಗುವ ವೇಳೆ ಬಾಕ್ಯಾರ್‌ನಲ್ಲಿ ತಪ್ಪಂಗಾಯಿ, ತೂಟೆ ದಾರ ಮುಂತಾದ ಜನಪದ ಸಾಂಪ್ರದಾಯಿಕ ಪ್ರಕ್ರಿಯೆ ನಡೆದು, ನಡಿಬೆಟ್ಟು ಶ್ರೀ ಬಬ್ಬುಸ್ವಾಮಿ ಪರಿವಾರ ದೈವಗಳ ಭೇಟಿ ಮಾಡಿ ದೈವಸ್ಥಾನಕ್ಕೆ ಬಂದು ಭಕ್ತರಿಗೆ ಅಭಯ ನುಡಿ ನೀಡಿ ನೇಮ ಸಂಪನ್ನಗೊಳ್ಳುತ್ತದೆ. ನೇಮದ ದೈವ ದಿನದಂದು ಭಕ್ತಾದಿಗಳಿಗೆ ತುಲಾಭಾರ ಸೇವೆ ಸಲ್ಲಿಸುವ ಅವಕಾಶವಿದೆ.
ಆನುವಂಶಿಕ ಮೊಕ್ತೇಸರ ಶಿರ್ವ ನಡಿಬೆಟ್ಟು ಯಜಮಾನ ದಾಮೋದರ ಚೌಟ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಕಾರ್ಯದರ್ಶಿ ನ್ಯಾರ್ಮ ಹೊಸಮನೆ ವಿ. ಸುಬ್ಬಯ್ಯ ಹೆಗ್ಡೆ ಮತ್ತು ಕೋಶಾಧಿಕಾರಿ ನ್ಯಾರ್ಮ ಕುಶ ಶೆಟ್ಟಿಯವರ ನೇತೃತ್ವದಲ್ಲಿ ಸ್ಥಳವಂದಿಗರು, ಆಡಳಿತ ಮಂಡಳಿ ಹಾಗೂ ಊರ, ಪರವೂರ ಭಕ್ತರ ಸಹಕಾರದೊಂದಿಗೆ ನೇಮ ನಡೆಯುತ್ತಿದೆ.