ದಕ್ಷಿಣ ಕನ್ನಡ (ಎ.7) : ಹೊಟ್ಟೆ ನೋವಿನಿಂದ ನರಳಿ ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಅಕ್ಕಪಕ್ಕದ ಮನೆಯ ಇಬ್ಬರು ಯುವತಿಯರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಎ. 6ರಂದು ಸಂಭವಿಸಿದೆ.
ಪಟ್ರಮೆ ಗ್ರಾಮದ ಪಟ್ಟೂರು ಬಾಬು ಅವರ ಪುತ್ರಿ ರಕ್ಷಿತಾ (22) ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮುಂಜಾನೆ ಮೃತಪಟ್ಟರೆ, ನೆರೆ ಮನೆಯವರಾದ ಶ್ರೀನಿವಾಸ ಆಚಾರ್ಯ ಅವರ ಪುತ್ರಿ ಲಾವಣ್ಯ (21) ಮಧ್ಯಾಹ್ನ ಮೃತಪಟ್ಟರೆನ್ನಲಾಗಿದೆ. ಇವರಲ್ಲಿ ರಕ್ಷಿತಾ ವಿಷ ಪದಾರ್ಥ ಸೇವಿಸಿರುವುದು ಮರಣೋತ್ತರ ಪರಿಕ್ಷೆಯಲ್ಲಿ ದೃಢಪಟ್ಟಿದೆ. ಲಾವಣ್ಯಾ ಸಾವಿಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ.
ಇವರಿಬ್ಬರು ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಎ. 4ರಂದು ಸಂಜೆ ರಕ್ಷಿತಾ ಮತ್ತು ಲಾವಣ್ಯ ಮನೆಯಲ್ಲಿ ಹೊಟ್ಟೆ ನೋವೆಂದು ಹೇಳಿ ನರಳಾಡಿ ತೀವ್ರ ಅಸ್ವಸ್ಥಗೊಂಡಿದ್ದರು. ಇಬ್ಬರನ್ನು ಸ್ಥಳೀಯರ ಸಹಕಾರದಲ್ಲಿ ನೆಲ್ಯಾಡಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ರಕ್ಷಿತಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮನೆಯವರು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಲಾವಣ್ಯರನ್ನು ಅವರ ಮನೆಯವರು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಬಳಿಕ ಸುರತ್ಕಲ್‌ನ ಆಸ್ಪತ್ರೆಗೆ ದಾಖಲಿಸಿದ್ದರು.
ಕಾರಣ ನಿಗೂಢ
ಅಕ್ಕಪಕ್ಕದ ಮನೆಯವರಾದ ಇಬ್ಬರೂ ಸ್ನೇಹಿತೆಯರಾಗಿದ್ದು, ಒಂದೇ ಕಡೆ ಉದ್ಯೋಗಿ ಮಾಡುತ್ತಿದ್ದರು. ರಕ್ಷಿತಾ ಒಂದೂವರೆ ವರ್ಷಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ಇಬ್ಬರೂ ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಇನ್ನೇನಾದರೂ ಘಟನೆ ಸಂಭವಿಸಿದೆಯೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ. ಧರ್ಮಸ್ಥಳ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಕ್ಷಿತಾ ಅವರು ಹೆತ್ತವರು, ಅಕ್ಕ, ಅಣ್ಣನನ್ನು ಅಗಲಿದ್ದಾರೆ. ಅಂತ್ಯಸಂಸ್ಕಾರವು ಎ. 6ರಂದು ರಾತ್ರಿ ನಡೆಯಿತು. ಲಾವಣ್ಯ ಅವರು ಹೆತ್ತವರು, ಅಣ್ಣ ಮತ್ತು ತಮ್ಮನನ್ನು ಅಗಲಿದ್ದಾರೆ.