ಉಡುಪಿ (ಎ.8) : ಮತದಾರರನ್ನು ಸೆಳೆಯಲು ಚುನಾವಣ ಆಯೋಗ ನಾನಾ ಪ್ರಯತ್ನ ನಡೆಸುತ್ತಿದೆ. ಇದರಲ್ಲಿ ಮತಗಟ್ಟೆಗಳ ಅಲಂಕಾರ, ಆಕರ್ಷಣೆಯೂ ಇದರ ಭಾಗವಾಗಿದೆ. ಪಿಂಕ್ ಮತಗಟ್ಟೆ, ಪಾರಂಪರಿಕ ಮತಗಟ್ಟೆ ಸಹಿತ ವಿವಿಧ ಪ್ರಕಾರಗಳನ್ನು ಇಲ್ಲಿ ಕಾಣಬಹುದಾಗಿದೆ.
ಈ ಬಾರಿಯ ಚುನಾವಣೆಯಲ್ಲಿಯೂ ಸ್ವೀಪ್ ಸಮಿತಿ ಮೂಲಕ ಇಂತಹ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಮತಗಟ್ಟೆಗಳನ್ನೂ ವಿಭಿನ್ನವಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ.
ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ತಲಾ ಐದರಂತೆ 25 ಸಖಿ ಮತಗಟ್ಟೆ, ತಲಾ ಒಂದರಂತೆ 5 ಅಂಗವಿಕಲ ಮತಗಟ್ಟೆ, 5 ಎಥಿ°ಕ್ ಮತಗಟ್ಟೆ, 5 ಯುವ ಮತಗಟ್ಟೆ, 5 ಥೀಮ್, 5 ಬುಡಗಟ್ಟು ಮತಗಟ್ಟೆಗಳನ್ನು ಮಾಡಲಾಗುತ್ತಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 1,111 ಬೂತ್‌ಗಳಿವೆ. ಸಖಿ ಮತಗಟ್ಟೆಗಳಲ್ಲಿ ವಿಶೇಷವಾಗಿ ಮಹಿಳೆಯರು, ಯುವಮತಗಟ್ಟೆಗಳಲ್ಲಿ ಯುವಕರು ಹೀಗೆ ಆಯಾ ವರ್ಗೀಕರಣಕ್ಕೆ ಸೂಕ್ತವಾಗಿ ಆಯಾ ವರ್ಗಗಳ ಸಿಬಂದಿಯನ್ನು ನಿಯೋಜಿಸಲಾಗುತ್ತದೆ. ಆದರೆ ಎಲ್ಲ ವಯೋಮಾನ, ಲಿಂಗಭೇದವಿಲ್ಲದೆ ಮತದಾರರು ಮತದಾನ ಮಾಡಬಹುದು. ಇವುಗಳಲ್ಲದೆ ಈಗಾಗಲೇ 100ಕ್ಕೂ ಅಧಿಕ ಮತಗಟ್ಟೆಗಳನ್ನು ಸಿಂಗರಿಸಲಾಗಿದೆ. ಇನ್ನೂ ಹೆಚ್ಚು ಮತಗಟ್ಟೆಗಳನ್ನು ಸಿಂಗರಿಸುವ ಉದ್ದೇಶವಿದೆ.
ಹೇಗಿರಲಿವೆ ಮತಗಟ್ಟೆ..!!??
ಯಕ್ಷಗಾನ, ಸಂಸ್ಕೃತಿ, ಪರಿಸರಪ್ರೇಮ, ಉಡುಪಿ ಸೀರೆ, ಕಂಬಳ, ಕ್ಷೇತ್ರದ ಪುರಾತನ ಕಲೆ, ಸಾಂಸ್ಕೃತಿಕ ವೈಭವ, ಪಾರಂಪರಿಕ, ಸಾಂಪ್ರದಾಯಿಕ ಕಲೆ, ಆಚರಣೆಗಳಾದ ಯಕ್ಷಗಾನ, ಕಂಬಳದ ಚಿತ್ರಗಳನ್ನು ಗೋಡೆ ಮೇಲೆ ಬಿಡಿಸುವುದು ಮಾತ್ರವಲ್ಲದೆ, ಮತದಾನದ ದಿನದಂದು ಆ ಮತಗಟ್ಟೆಯನ್ನು ಸಾಂಪ್ರದಾಯಿಕ, ಪಾರಂಪರಿಕ ಕಲೆಗೆ ಪೂರಕವಾಗಿ ಸಿಂಗರಿಸಲಾಗುತ್ತದೆ. ಯಕ್ಷಗಾನ ಸೇರಿದಂತೆ ಸ್ಥಳೀಯ ಕಲೆಗಳಿಗೆ ಅಲ್ಲಿ ಪ್ರಾಮುಖ್ಯತೆಯನ್ನು ನೀಡುವ ಮೂಲಕ ಮತಗಟ್ಟೆಗೆ ಮತದಾರರನ್ನು ಆಕರ್ಷಿಸಲಾಗುತ್ತದೆ. ಬುಡಕಟ್ಟು ಶೈಲಿಯ ಮತಗಟ್ಟೆಗಳಲ್ಲಿ ಬಿದಿರಿನಿಂದ ಸಿದ್ಧಪಡಿಸಿದ ವಸ್ತುಗಳಿಂದ ಅಲಂಕಾರ ಮಾಡಲಾಗುತ್ತದೆ.
ಶಿಕ್ಷಕರು, ಕಲಾವಿದರ ಸಹಕಾರ ಆಯ್ದ ಮತಗಟ್ಟೆಗಳ ಸಿಂಗಾರಕ್ಕೆ ಕಲಾವಿದರು ಹಾಗೂ ಸರಕಾರಿ ಶಾಲೆಗಳ ಚಿತ್ರಕಲಾ ಶಿಕ್ಷಕರು ಸ್ವೀಪ್ ಸಮಿತಿಗೆ ಸಹಕಾರ ನೀಡಲಿದ್ದಾರೆ. ಅನುದಾನಿತ ಶಾಲೆ ಹಾಗೂ ಕೆಲವು ಚಿತ್ರಕಲಾ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೂ ನೆರವು ನೀಡುತ್ತಿದ್ದಾರೆ.
ಸೂಕ್ಷ್ಮ,ಅತೀ ಸೂಕ್ಷ್ಮ ಮತಗಟ್ಟೆ ಇನ್ನಷ್ಟೇ ತೀರ್ಮಾನ
ಜಿಲ್ಲೆಯಲ್ಲಿ ಮಾಡಬೇಕಿರುವ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳ ವಿವರಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರವಾಗಲಿದೆ ಎಂದು ಮೇಲ್ವಿಚಾರಕರು ತಿಳಿಸಿದ್ದಾರೆ.