ರಾಜ್ಯ ವಿಧಾನ ಸಭಾ ಚುನಾವಣೆ ಹೊತ್ತಲ್ಲಿ ಕರಾವಳಿಯಲ್ಲಿ ಬಿಜೆಪಿ ಮತ್ತೊಂದು ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಕಳೆದ ವರ್ಷ ಕೊಲೆಯಾದ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ, ಹಿಂದೂ ಕಾರ್ಯಕರ್ತ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹೊಸ ಮನೆ ಗೃಹ ಪ್ರವೇಶಕ್ಕೆ ಎಲೆಕ್ಷನ್ ಟೈಮ್ನಲ್ಲೇ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಚುನಾವಣೆ ಹೊಸ್ತಿಲಲ್ಲಿ ಪ್ರವೀಣ್ ನೆಟ್ಟಾರು ಅವರ ಕನಸಿನ ಮನೆಗೆ ಗೃಹ ಪ್ರವೇಶ ಮಾಡಿಸುವ ಮೂಲಕ ಸಿಂಪತಿಗಳಿಸಿ ಮತದಾರರ ಮನೆ ಗೆಲ್ಲಲು ಬಿಜೆಪಿ ಮುಂದಾಗಿದೆ.
ರಾಜ್ಯ ಬಿಜೆಪಿ ಮತ್ತು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮೃತ ಪ್ರವೀಣ್ ನೆಟ್ಟಾರು ಅವರ ಕನಸಿನ ಮನೆ ನಿರ್ಮಾಣವಾಗುತ್ತಿದೆ. ಬಹುತೇಕ 90% ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ವೇಗವಾಗಿ ಮನೆ ನಿರ್ಮಾಣ ಪೂರ್ತಿಗೊಳಿಸಿ ಏ.27ರಂದು ಗೃಹ ಪ್ರವೇಶ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಹತ್ಯೆಯಾದ ಕಾರ್ಯಕರ್ತನ ಕುಟುಂಬದ ಪರ ನಿಂತಿದ್ದೇವೆ ಎಂದು ಬಿಜೆಪಿ ಸಂದೇಶ ಸಾರಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ನೆಟ್ಟಾರುವಿನಲ್ಲಿ 2022ರ ನವೆಂಬರ್ 2ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಗುದ್ದಲಿಪೂಜೆ ನೆರವೇರಿಸಿದ್ದರು. ಪ್ರವೀಣ್ ನೆಟ್ಟಾರು ಕನಸಿನ ಮನೆಯನ್ನು 2,700 ಚ.ಅಡಿಯಲ್ಲಿ 60 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಪ್ರವೀಣ್ ಕನಸು ನನಸು ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಪ್ರವೀಣ್ ಪತ್ನಿಗೆ ಸದ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರ್ಕಾರಿ ಉದ್ಯೋಗ ನೀಡಲಾಗಿದೆ. ಜುಲೈ 26 ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಪ್ರವೀಣ್ ಹತ್ಯೆ ಬಳಿಕ ತೀವ್ರ ಮುಜುಗರಕ್ಕೆ ಈಡಾಗಿದ್ದ ಬಿಜೆಪಿ ನಾಯಕರು ಸದ್ಯ ಈಗ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ.
2022ರ ಜುಲೈ 26 ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಅದರ ಮರುದಿನ ನಡೆದ ಅಂತ್ಯಕ್ರಿಯೆಯ ವೇಳೆ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರನ್ನು ಅರ್ಧ ದಾರಿಯಲ್ಲೇ ತಡೆಯಲಾಗಿತ್ತು. ನಳೀನ್ ಮತ್ತು ಸುನೀಲ್ ಕುಮಾರ್ ಕಾರನ್ನು ತಡೆದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಬಿಜೆಪಿ ಇದರ ಡ್ಯಾಮೇಜ್ ಕಂಟ್ರೋಲ್ ಮಾಡುತ್ತಿದ್ದು ಮನೆ ಕಟ್ಟಿಕೊಡುತ್ತಿದ್ದಾರೆ.