ಮಂಗಳೂರು: ಕರಾವಳಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗೆ ಕೆಎಸ್ಸಾರ್ಟಿಸಿ ನಿರ್ಧರಿಸಿದ್ದು, 6 ತಿಂಗಳೊಳಗೆ ಸುಮಾರು 90 ಎಸಿ ಮತ್ತು ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರಸ್ತೆಗಿಳಿಯಲಿವೆ.
ಎರಡೂ ಡಿಪೋಗಳಿಂದ ಬಸ್‌ಗಳಿಗೆ ಬೇಡಿಕೆ ಇದ್ದರೂ ನಿಗಮದಲ್ಲಿ ಬಸ್‌ಗಳ ಕೊರತೆ ಇದೆ. ಎಲೆಕ್ಟ್ರಿಕ್ ಬಸ್‌ಗಳು ಈ ಸಮಸ್ಯೆಯನ್ನು ಕೊಂಚ ಮಟ್ಟಿಗೆ ನಿವಾರಿಸುವ ನಿರೀಕ್ಷೆ ಇದೆ. ಈಗಾಗಲೇ ಕೆಲವು ಎಲೆಕ್ಟ್ರಿಕ್ ಬಸ್‌ಗಳು ಕೆಎಸ್ಸಾರ್ಟಿಸಿಗೆ ಬಂದಿದ್ದರೂ ಮಂಗಳೂರು ಮತ್ತು ಪುತ್ತೂರು ವಿಭಾಗಕ್ಕೆ ಬಂದಿಲ್ಲ. ಎರಡನೇ ಹಂತದಲ್ಲಿ ಇಲ್ಲಿಗೂ ಒದಗಿಸಲು ನಿರ್ಧರಿಸಲಾಗಿದೆ.
ಬಸ್ಸಿಗೆ ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 250 ಕಿ.ಮೀ. ಸಂಚರಿಸುತ್ತದೆ. ಮಂಗಳೂರಿನ ಕುಂಟಿಕಾನದಲ್ಲಿರುವ ಮೂರನೇ ಡಿಪೋದಲ್ಲಿ ಮತ್ತು ಧರ್ಮಸ್ಥಳ ಡಿಪೋದಲ್ಲಿ ಚಾರ್ಜಿಂಗ್ ಸ್ಟೇಷನ್ ನಿರ್ಮಾಣವಾಗಲಿದೆ.
ಪ್ರಸ್ತಾವಿತ ಮಾರ್ಗ
ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವುದಾದರೆ ಯಾವ್ಯಾವ ರೂಟ್‌ಗಳಿವೆ ಎಂದು ಮಾಹಿತಿ ಒದಗಿಸುವಂತೆ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯು ಮಂಗಳೂರು ಮತ್ತು ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗಕ್ಕೆ ತಿಳಿಸಿದೆ. ಸ್ಟೇಟ್‌ಬ್ಯಾಂಕ್‌ನಿಂದ ಉಡುಪಿ, ಮಣಿಪಾಲಕ್ಕೆ 20 ಬಸ್, ಮಂಗಳೂರಿನಿಂದ ಧರ್ಮಸ್ಥಳಕ್ಕೆ 10, ಕಾಸರಗೋಡು ಅಥವಾ ಇತರ ರೂಟ್‌ಗಳಲ್ಲಿ 10 ಬಸ್‌ಗಳನ್ನು ಕಾರ್ಯಾಚರಿಸಲು ಚಿಂತಿಸಲಾಗಿದೆ.
ಇನ್ನುಳಿದ ಬಸ್‌ಗಳನ್ನು ಪುತ್ತೂರು ವಿಭಾಗದಿಂದ ಧರ್ಮಸ್ಥಳ, ಮಂಗಳೂರು, ಸುಬ್ರಹ್ಮಣ್ಯ ಮಾರ್ಗಗಳಲ್ಲಿ ಓಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ..