‘ಪಕ್ಷದ ನಾಯಕತ್ವ ನನಗೆ ಟಿಕೆಟ್ ನೀಡುತ್ತದೆ ಅನ್ನುವ ವಿಶ್ವಾಸವಿದೆ., ಮೂರು ಬಾರಿ ಶಾಸಕನಾಗಿದ್ದೇನೆ ನಾನು ಯಾವತ್ತೂ ಸೋತಿಲ್ಲ’- ರಘುಪತಿ ಭಟ್

ಉಡುಪಿ (ಎ.10) : “ನಾನು ಪಕ್ಷದ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದೇನೆ. ಪಕ್ಷದ ನಾಯಕತ್ವ ನನಗೆ ಟಿಕೆಟ್ ನೀಡುತ್ತದೆ ಅನ್ನುವ ವಿಶ್ವಾಸವಿದೆ. ಮೂರು ಬಾರಿ ಶಾಸಕನಾಗಿದ್ದೇನೆ ನಾನು ಯಾವತ್ತೂ ಸೋತಿಲ್ಲ. ಕೇವಲ ಮಾಧ್ಯಮಗಳಲ್ಲಿ ಚರ್ಚೆಯಾಗುವುದು ಬಿಟ್ಟರೆ ಪಕ್ಷದಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ” ಎಂದು ಉಡುಪಿ ಶಾಸಕ ಕೆ ರಘುಪತಿ ಭಟ್ ಹೇಳಿದ್ದಾರೆ.

ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುತ್ತಾ ಎಂಬ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣ ಎಂಬ ಕಾರಣಕ್ಕೆ ನನಗೆ ಟಿಕೆಟ್ ಕೈತಪ್ಪುವುದಿಲ್ಲ. ನಮ್ಮದು ರಾಷ್ಟ್ರೀಯ ವಿಚಾರಧಾರೆ ಇರುವ ಪಕ್ಷ. ಜಾತಿ ಆಧಾರದ ಮೇಲೆ ಅಭ್ಯರ್ಥಿಯನ್ನು ಪಕ್ಷ ಇತ್ಯರ್ಥ ಮಾಡುವುದಿಲ್ಲ. ಹಿಂದುತ್ವ ಪಾಲಿಸಿಕೊಂಡು ಬಂದ ಪಕ್ಷ. ಬಿಜೆಪಿಯಲ್ಲಿ ನಾನು ಜಾತಿಯ ಅಭ್ಯರ್ಥಿ ಅಲ್ಲ. ಈವರೆಗೆ ನನಗೆ ಬ್ರಾಹ್ಮಣ ಎಂಬ ಕಾರಣಕ್ಕೆ ಟಿಕೆಟ್ ನೀಡಿದ್ದಲ್ಲ ಎಂದರು.

ನಾನು ಈಗ ಹಾಲಿ ಶಾಸಕ. ನಾನು ಬ್ರಾಹ್ಮಣ ಜಾತಿಯಲ್ಲಿದ್ದರೂ ನಮ್ಮ ಕ್ಷೇತ್ರದಲ್ಲಿ ಅನ್ಯ ಸಮುದಾಯದವರೇ ಹೆಚ್ಚಿದ್ದಾರೆ. ಬಿಲ್ಲವ ಬಂಟ ಮೊಗವೀರ ಸಂಖ್ಯೆ ಹೆಚ್ಚಿದೆ. ನನ್ನ ಕ್ಷೇತ್ರದಲ್ಲಿ ಕೇವಲ ಬೆರಳೆಣಿಕೆಯ ಬ್ರಾಹ್ಮಣರು ಇದ್ದಾರೆ. ನಾನು ಒಳ್ಳೆ ಕಾರ್ಯಕರ್ತ ಎಂಬ ಕಾರಣಕ್ಕೆ ನನಗೆ ಇವರಿಗೆ ಸೀಟ್ ನೀಡಿದ್ದಾರೆ. ಕುಂದಾಪುರದಲ್ಲಿ ಬದಲಾವಣೆ ಮಾಡುವುದಾದರೆ, ಅಲ್ಲಿ ಬ್ರಾಹ್ಮಣ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬಗ್ಗೆ ಆಲೋಚನೆ ಮಾಡಬೇಕು. ನನ್ನನ್ನು ಬದಲಾವಣೆ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳುವುದಿಲ್ಲ ವಿಶ್ವಾಸವಿದೆ ಎಂದಿದ್ದಾರೆ.

ಇನ್ನು ನಮ್ಮ ಜಿಲ್ಲೆಯಲ್ಲಿ ಯಾರು ಜಾತಿ ನೋಡುವುದಿಲ್ಲ. ಇಬ್ಬರು ಬ್ರಾಹ್ಮಣ ಅಭ್ಯರ್ಥಿಗಳಿಗೆ ನೀಡಿದರೆ ಯಾರು ಆಕ್ಷೇಪಿಸುವುದಿಲ್ಲ. ಟಿಕೆಟ್ ಕೊಟ್ಟರೆ ನಾನು ಬ್ರಾಹ್ಮಣ ಎಂಬ ಕಾರಣಕ್ಕೆ ಯಾರು ಆಕ್ಷೇಪಿಸುವುದಿಲ್ಲ. ಒಳ್ಳೆಯ ಕಾರ್ಯಕರ್ತನಿಗೆ ಒಳ್ಳೆಯ ಕೆಲಸಗಾರನಿಗೆ ಅವಕಾಶ ನೀಡುವುದೇ ಪ್ರಯೋಗ. ಬಿಜೆಪಿ ಒಟ್ಟಾರೆ ಪ್ರಯೋಗ ಮಾಡುವುದಿಲ್ಲ. ಕ್ಷೇತ್ರದಲ್ಲಿ ಕೆಲಸ ಮಾಡಿದವನನ್ನು ಬಿಜೆಪಿ ಬೆಂಬಲಿಸುತ್ತೆ. ನನಗೆ ಸಮಸ್ಯೆ ಬರುವುದಿಲ್ಲ ಅನ್ನೋ ಪೂರ್ತಿ ವಿಶ್ವಾಸ ಇದೆ. ನಾನು ಆಶಾವಾದಿ, ಒಮ್ಮೆಯು ಸೋಲದ ಹಾಲಿ ಶಾಸಕ. ಟಿಕೆಟ್ ಸಿಗುವ ಬಗ್ಗೆ ನನಗೆ ಪೂರ್ಣವಿಶ್ವಾಸವಿದೆ ಎಂದು ಹೇಳಿದ್ದಾರೆ.

You cannot copy content from Baravanige News

Scroll to Top