ಶಿರ್ವ: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ಸಲುವಾಗಿ ಪೊಲೀಸ್ ಇಲಾಖೆ ಮತ್ತು ಕ್ಷಿಪ್ರಕಾರ್ಯಾಚರಣೆ ಪಡೆ ಸನ್ನದ್ಧರಾಗಿದ್ದು, ಶಿರ್ವ ಪರಿಸರದ ಜನತೆಯಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಪೂರ್ವಭಾವಿಯಾಗಿ ಸೋಮವಾರ ಸಂಜೆ ಪಥಸಂಚಲನ ನಡೆಯಿತು.
ಉಡುಪಿ ಜಿಲ್ಲಾ ಕಾಪು ವೃತ್ತ ವ್ಯಾಪ್ತಿಯ ಶಿರ್ವ ಮಂಚಕಲ್ ಪೇಟೆಯಲ್ಲಿ ಸಶಸ್ತ್ರಧಾರಿ ಕ್ಷಿಪ್ರ ಕಾರ್ಯಾಚರಣೆ ಪಡೆಯ ಯೋಧರು ಮತ್ತು ಕಾಪು,ಶಿರ್ವ ಮತ್ತು ಪಡುಬಿದ್ರಿ ಠಾಣೆಯ ಸಿಬಂದಿಯೊಂದಿಗೆ ಶಿರ್ವ ಆರೋಗ್ಯಮಾತಾ ದೇವಾಲಯದ ದ್ವಾರದ ಬಳಿಯಿಂದ ಶಿರ್ವ ಪೊಲೀಸ್ ಠಾಣೆಯವರೆಗೆ ಪಥ ಸಂಚಲನ ನಡೆಯಿತು.
ಕಾಪು ಕ್ಷೇತ್ರ ಚುನಾವಣಾಧಿಕಾರಿ ಬಿನೋಯ್, ಕಾಪು ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಕಾಪು ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ, ಕ್ಷಿಪ್ರ ಕಾರ್ಯಾಚರಣೆ ಪಡೆಯ ಇನ್ಸ್‌ಪೆಕ್ಟರ್‌ಗಳಾದ ಟಿ.ಕೆ.ಪಾಂಡೆ ಮತ್ತು ಗಿರೀಶ್ ಪ್ರಸಾದ್, ಪಡುಬಿದ್ರಿ ಠಾಣೆಯ ಪಿಎಸ್‌ಐಗಳಾದ ಪುರುಷೋತ್ತಮ್ ಮತ್ತು ಶಿವರುದ್ರಮ್ಮ, ಕಾಪು ಪಿಎಸ್‌ಐ ಭರತೇಶ್, ಶಿರ್ವ ಪಿಎಸ್‌ಐ ರಾಘವೇಂದ್ರ .ಸಿ ಹಾಗೂ ಸುಮಾರು 100 ಯೋಧರು ಹಾಗೂ ಕಾಪು,ಪಡುಬಿದ್ರಿ ಮತ್ತು ಶಿರ್ವ ಠಾಣೆಯ 100ಕ್ಕೂ ಹೆಚ್ಚು ಪೊಲೀಸ್ ಸಿಬಂದಿ ಪಥಸಂಚಲನದಲ್ಲಿ ಭಾಗವಹಿಸಿದ್ದರು.