ಕುಂದಾಪುರ: ಉಡುಪಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದರೂ ಬೈಂದೂರು ಕ್ಷೇತ್ರವನ್ನು ಬಾಕಿ ಇರಿಸಲಾಗಿದೆ.
ಇಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಸಿಗಬಹುದೇ ಅಥವಾ ಈ ಬಾರಿ ಅಚ್ಚರಿಯ ಆಯ್ಕೆ ಎನ್ನುವಂತೆ ಹೊಸಬರಿಗೆ ಮಣೆ ಹಾಕುವರೇ ಅನ್ನುವ ಕುತೂಹಲ ಮುಂದುವರಿದಿದೆ.
ಹಾಲಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಯವರು ಈ ಬಾರಿಯೂ ಆಕಾಂಕ್ಷಿಯಾಗಿದ್ದಾರೆ. ಇದರೊಂದಿಗೆ ಬಿಜೆಪಿ ಬೈಂದೂರು ಮಂಡಲದ ಮಾಜಿ ಅಧ್ಯಕ್ಷ, ಹಿಂದೂ ಸಂಘಟನೆ ಪರ ಮುಖಂಡ ಪ್ರಣಯ್ ಕುಮಾರ್ ಶೆಟ್ಟಿ, ಆರೆಸ್ಸೆಸ್ ಹಿನ್ನೆಲೆಯ, ಬಿಜೆಪಿ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಗುರುರಾಜ್ ಗಂಟಿಹೊಳೆ ಮಧ್ಯೆಯೂ ಪೈಪೋಟಿ ಏರ್ಪಟ್ಟಿದೆ. ಈ ಇಬ್ಬರು ಹೊಸಬರಿಗೆ ಮಣೆ ಹಾಕುವರೇ ಅಥವಾ ಹಾಲಿ ಶಾಸಕರಿಗೆ ಮತ್ತೂಂದು ಬಾರಿ ಅವಕಾಶ ನೀಡುವರೇ ಅನ್ನುವ ಪ್ರಶ್ನೆ ಉದ್ಭವಿಸಿದೆ.
ಬೆಂಬಲಿಗರ ದೌಡು
ಸುಕುಮಾರ್ ಶೆಟ್ಟರಿಗೆ ಈ ಬಾರಿ ಟಿಕೆಟ್ ಇಲ್ಲ ಎನ್ನುವುದಾಗಿ ಬಿಜೆಪಿ ಪ್ರಮುಖರೊಬ್ಬರು ಕರೆ ಮಾಡಿದ್ದಾರೆನ್ನುವ ಅಂಶ ಸುದ್ದಿ ಮೂಲಗಳಿಂದ ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಅವರ ನೆಂಪುವಿನ ನಿವಾಸದಲ್ಲಿ ಮಂಗಳವಾರ ರಾತ್ರಿ ಟಿಕೆಟ್ ಪಟ್ಟಿ ಪ್ರಕಟವಾಗುವರೆಗೂ ಕೆಲವು ಪ್ರಮುಖರು, ಬೆಂಬಲಿಗ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕ ಮಂದಿ ಸೇರಿದ್ದರು. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಮತ್ತೂಂದು ಬಾರಿ ಅವಕಾಶ ನೀಡಬೇಕೆಂಬುದು ಬೆಂಬಲಿಗರ ಆಗ್ರಹ. ಮತ್ತೂಂದೆಡೆ ಮಂಗಳವಾರ ಬೆಳಗ್ಗೆ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ, ಜಿ.ಪಂ. ಮಾಜಿ ಸದಸ್ಯ ಬಾಬು ಹೆಗ್ಡೆ ಅವರ ಮನೆ ಮುಂದೆಯೂ ನೂರಾರು ಮಂದಿ ಸೇರಿದ್ದರು.
ಯಾಕೆ ವಿಳಂಬ..!!??
ಜಿಲ್ಲೆಯ ಉಳಿದೆಲ್ಲ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಿದ್ದರೂ, ಬೈಂದೂರು ಮಾತ್ರ ಯಾಕೆ ಬಾಕಿ ಉಳಿಸಿಕೊಂಡಿದ್ದಾರೆ ಎನ್ನುವುದೇ ಅಚ್ಚರಿ ಮೂಡಿಸಿದೆ. ಈ ಕ್ಷೇತ್ರದ ಮೇಲೆ ಜಿಲ್ಲಾ ಬಿಜೆಪಿಗಿಂತ ಬಿ.ಎಸ್.ಯಡಿಯೂರಪ್ಪ ಅವರ ಹಿಡಿತ ಹೆಚ್ಚಿದೆ. ಸಂಸದ ಬಿ.ವೈ. ರಾಘವೇಂದ್ರ ಅವರು ಕೂಡ ಅಭ್ಯರ್ಥಿ ಅಂತಿಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಯಡಿಯೂರಪ್ಪ ಅವರು ಸೂಚಿಸುವ ಅಭ್ಯರ್ಥಿಗೆ ಇಲ್ಲಿ ಅಂತಿಮವಾಗಿ ಟಿಕೆಟ್ ಸಿಗುವ ಸಾದ್ಯತೆಯಿದೆ ಎಂದು ಹೇಳಲಾಗುತ್ತಿದೆ.