ದಕ್ಷಿಣ ಕ್ನನಡ: ಸುಳ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಸಕ್ರಿಯ ರಾಜಕಾರಣಕ್ಕೆ ಸಚಿವ ಎಸ್.ಅಂಗಾರ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಚುನಾವಣಾ ಪ್ರಚಾರಕ್ಕೂ ಹೋಗದಿರಲು ನಿರ್ಧರಿಸಿದ್ದಾರೆ. ಆರು ಸುಳ್ಯ ಕ್ಷೇತ್ರದಿಂದ ಸತತ ಆರು ಬಾರಿ ಗೆದ್ದು ಶಾಸಕರಾಗಿದ್ದ ಎಸ್. ಅಂಗಾರ ಅವರಿಗೆ ಈ ಬಾರಿ ವಿಧಾನಸಭೆ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಲಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಅಂಗಾರ, ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ.
7 ಬಾರಿ ಸುಳ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂಗಾರ, ಮೊದಲ ಬಾರಿಗೆ ಸೋಲನ್ನು ಅನುಭವಿಸಿದ್ದರು. ಬಳಿಕ ಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ಎರಡುವರೆ ವರ್ಷದಿಂದ ಮೀನುಗಾರಿಕೆ ಸಚಿವರಾಗಿದ್ದರು. ಸುಳ್ಯದಲ್ಲಿ ಸೋಲಿಲ್ಲದ ಸರದಾರ ಎಂಬ ಖ್ಯಾತಿ ಪಡೆದಿದ್ದರು.
ಸದ್ಯದ ಬೆಳವಣಿಗೆ ಕಾರ್ಯಕರ್ತರಲ್ಲಿ ಸಂಶಯ ತರಿಸಿದೆ. ಯಾರ ಮೇಲೆ ವಿಶ್ವಾಸ ಇಡಬೇಕು ಎನ್ನುವಂತಾಗಿದೆ. ಲಾಬಿ ಮಾಡಿದವರಿಗೆ ಸೀಟು, ಲಾಬಿ ಮಾಡದವರಿಗೆ ಸೀಟು ಇಲ್ಲ ಎಂಬಂತಾಗಿದೆ. ನಾನು ಪಕ್ಷ, ಪಕ್ಷದ ನಾಯಕರನ್ನು ದೂರುವುದಿಲ್ಲ. ನನ್ನ ನಡೆಯೇ ನನಗೆ ಮುಳ್ಳಾಯಿತು. ಇಲ್ಲಿಗೆ ರಾಜಕೀಯ ಸಾಕು ಎಂದು ಅಸಮಾಧಾನ ಹೊರ ಹಾಕಿದರು.
ಇಷ್ಟು ವರ್ಷ ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಮಾಡಿದ ಸೇವೆಯನ್ನು ಗೌರವಿಸುವ ಕ್ರಮ ಇದಲ್ಲ. ಪ್ರಾಮಾಣಿಕ ರಾಜಕಾರಣಕ್ಕೆ ಇಂದು ಬೆಲೆ ಇಲ್ಲದಂತಾಗಿದೆ. ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ಲಾಬಿ ಮಾಡುವುದು ನನ್ನ ಗುಣವಾಗಿರಲಿಲ್ಲ. ಅದೇ ನನಗೆ ಹಿನ್ನಡೆಯಾಯಿತು ಎಂದು ಬೇಸರ ವ್ಯಕ್ತಪಡಿಸಿದರು.